ಜಿಲ್ಲೆ

ವಿದ್ಯಾರ್ಥಿಗಳ ಸಂಖ್ಯೆ ಲಕ್ಷಕ್ಕೆ ಹೆಚ್ಚಿಸುವ ಮುಕ್ತ ವಿವಿ ಸಂಕಲ್ಪ

ಮಂಜುನಾಥ ಟಿ.ಭೋವಿ ಮೈಸೂರು
ದೂರ ಶಿಕ್ಷಣಕ್ಕಾಗಿಯೇ ಮೀಸಲಾಗಿರುವ ರಾಜ್ಯದ ಏಕೈಕ ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’ ವಿದ್ಯಾರ್ಥಿಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸಲು ಸಂಕಲ್ಪ ಮಾಡಿದೆ.

ಈ ಗುರಿ ಸಾಧನೆಗಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಅಭಿಯಾನ ಕೈಗೊಂಡಿದ್ದು, ಬೋಧಕರಿಗೆ ಗುರಿ ನಿಗದಿಪಡಿಸಲಾಗಿದೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ವಿದ್ಯಾರ್ಥಿಗಳ ನೋಂದಣಿಗೆ ಮುಂದಾಗಿದೆ.


ದಾಖಲಾತಿಗೆ ಒತ್ತು:

ಮಾನ್ಯತೆ ಸಮಸ್ಯೆಯಿಂದ ತತ್ತರಿಸಿಹೋಗಿದ್ದ ಮುಕ್ತ ವಿವಿ ಇದೀಗ ಚೇತರಿಕೆ ದಾರಿಯಲ್ಲಿ ಸಾಗುತ್ತಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಏರಿಕೆಯಾಗುತ್ತಿಲ್ಲ. ಒಂದು ಕಾಲದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಅದು ಮುಕ್ತ ವಿವಿ ಪಾಲಿನ ಸುವರ್ಣಯುಗ. ಆದರೆ ಈ ನಡುವೆ ಯುಜಿಸಿ ಮಾನ್ಯತೆ ರದ್ದಾಗಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದು ಪ್ರವೇಶಾತಿಯೊಂದಿಗೆ ಆದಾಯವನ್ನೂ ತಗ್ಗಿಸಿದೆ. 64 ಕೋರ್ಸ್‌ಗಳನ್ನು ಬೋಧಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಸದ್ಯ 21 ಸಾವಿರದ ಗಡಿ ದಾಟಿಲ್ಲ.


ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೋಲಿಸಿದರೆ ಸಿಬ್ಬಂದಿ ಸಂಖ್ಯೆಯೇ ಅಧಿಕ. 150 ಬೋಧಕರು ಸೇರಿದಂತೆ ಬೋಧಕರೇತರರು, 23 ಪ್ರಾದೇಶಿಕ ಕೇಂದ್ರಗಳಲ್ಲಿ ತಲಾ 6 ಸಿಬ್ಬಂದಿ ಸೇರಿದಂತೆ ವಿವಿ ವ್ಯಾಪ್ತಿಯಲ್ಲಿ ಅಂದಾಜು 1200 ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳ ಪ್ರವೇಶ ಶುಲ್ಕದಿಂದ ನಡೆಯುವ ವಿವಿ ಸಿಬ್ಬಂದಿಯ ವೇತನಕ್ಕೆ ದೊಡ್ಡ ಮೊತ್ತವನ್ನು ನೀಡಬೇಕಾಗುತ್ತದೆ. ಆದ್ದರಿಂದ ದಾಖಲಾತಿ ಸಂಖ್ಯೆ ಹೆಚ್ಚಾದರೆ ಮಾತ್ರ ವಿವಿ ಆಂತರಿಕ ಸಂಪನ್ಮೂಲದಲ್ಲೂ ವೃದ್ಧಿಯಾಗಲು ಸಾಧ್ಯ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿವಿ, ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ವಹಿಸಿದೆ.

ಸಿಬ್ಬಂದಿಗೆ ಗುರಿ ನಿಗದಿ:
ವಿವಿಧ ವಿಭಾಗಗಳ ಸಿಬ್ಬಂದಿ ದಾಖಲಾತಿ ನೋಂದಣಿಯಲ್ಲಿ ತೊಡಗಿದ್ದಾರೆ. ಎಂಬಿಎ ಕೋರ್ಸ್‌ನ ಬಹಳಷ್ಟು ಸೀಟ್‌ಗಳು ಖಾಲಿ ಉಳಿದಿವೆ. ಇವುಗಳ ಭರ್ತಿಗಾಗಿ ಆ ವಿಭಾಗದ ಸಿಬ್ಬಂದಿ, ಬೋಧಕರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ವಿಜ್ಞಾನ ನಿಕಾಯದ 15 ವಿಭಾಗಗಳಿಗೂ ಪ್ರವೇಶಾತಿ ಹೆಚ್ಚಿಸಲು ಗುರಿ ನೀಡಿ ಬೋಧಕರನ್ನು ಮೈಸೂರಿನ ಆಚೆ ಕಳುಹಿಸಿಕೊಡಲಾಗಿದೆ.

ಆಯಾ ಜಿಲ್ಲೆಯಲ್ಲೇ ಕಲಿಕೆ:
ವಿದ್ಯಾರ್ಥಿಗಳು ಇರುವ ಕಡೆಗೆ ತೆರಳಲು ಮುಕ್ತ ವಿವಿ ಮುಕ್ತ ಹೆಜ್ಜೆ ಇಟ್ಟಿದೆ. ಅದಕ್ಕಾಗಿ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳು ಅಲ್ಲಿಯೇ ಪ್ರಾಯೋಗಿಕ ಮತ್ತು ಬೋಧನಾ ತರಗತಿಗಳಿಗೆ ಹಾಜರಾಗಲು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಈ ದಿಸೆಯಲ್ಲಿ ಆಯಾ ಭಾಗದಲ್ಲಿರುವ ವಿಶ್ವವಿದ್ಯಾಲಯಗಳು, ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಆರ್ಥಿಕ ಹೊರೆ ಇಲ್ಲದೆ ಅಲ್ಲಿರುವ ಸೌಲಭ್ಯ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸುಲಭವಾಗಿ ತಲುಪಿಸಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಹೇಳಿದರು.

ವಿವಿ ಕಾರ್ಯವ್ಯಾಪ್ತಿ ವಿಸ್ತರಣೆ:
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಮುಕ್ತ ವಿವಿ ಕಾರ್ಯವ್ಯಾಪ್ತಿ ವಿಸ್ತರಣೆಗೆ ಗಮನ ನೀಡಲಾಗುತ್ತಿದೆ. ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ಆ ಭಾಗದ ಪ್ರತಿ ಜಿಲ್ಲೆಯಲ್ಲಿ ಕಟ್ಟಡ ಸೇರಿದಂತೆ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು 1ರಿಂದ 5 ಎಕರೆವರೆಗೆ ಜಾಗ ನೀಡಲು ಕೋರಲಾಗಿದೆ ಎಂದು ಕುಲಪತಿ ಮಾಹಿತಿ ನೀಡಿದರು.

95 ಸಾವಿರ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಕ್ರಮ
ಮಾನ್ಯತೆ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ 2013-14ನೇ ಸಾಲಿನ 49,675 ಮತ್ತು 2014-15ನೇ ಸಾಲಿನ 46,178 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 95,853 ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುತ್ತಿದೆ. ಯುಜಿಸಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉನ್ನತ ಶಿಕ್ಷಣ, ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ಪದವಿ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಪ್ರೊ. ಹಲಸೆ ತಿಳಿಸಿದರು.

ನ್ಯಾಕ್ ಮಾನ್ಯತೆ ಪ್ರಯತ್ನ
ನ್ಯಾಕ್ ಮಾನ್ಯತೆ ಪಡೆದುಕೊಳ್ಳಲು ಮುಕ್ತ ವಿವಿ ಶ್ರಮಿಸುತ್ತಿದೆ. ಯುಜಿಸಿಗೆ ಸೇರಿದ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‌ಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ನ್ಯಾಕ್ ಸಮಿತಿ ಇಲ್ಲಿಗೆ ಭೇಟಿ ನೀಡಿ ಪರಾಮರ್ಶೆ ಮಾಡಲಿದ್ದು, ಉತ್ತಮ ಸೌಲಭ್ಯ, ಬೋಧಕ ಸಿಬ್ಬಂದಿ ಇರುವ ಕಾರಣಕ್ಕೆ ನ್ಯಾಕ್‌ನ ಎ++ ಶ್ರೇಣಿ ದೊರೆಯುವ ನಿರೀಕ್ಷೆಯಲ್ಲಿ ಮುಕ್ತ ವಿವಿ ಇದೆ. ಈ ಮಾನ್ಯತೆಯಿಂದ ಆನ್‌ಲೈನ್ ಕೋರ್ಸ್‌ಗೆ ಅನುಮತಿ ದೊರೆಯಲಿದೆ. ಜಗತ್ತಿನ ವಿವಿಧ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡಲು ಮುಕ್ತ ವಿವಿ ಸಿದ್ಧವಾಗುತ್ತಿದೆ.

ಹೊಸದಾಗಿ 10 ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಎಂಎಸ್‌ಡಬ್ಲುೃ, ಎಂಸಿಎ, ಪ್ರವಾಸೋದ್ಯಮ, ಭೂವಿಜ್ಞಾನ ಇನ್ನಿತರ ಕೋರ್ಸ್ ಶುರು ಮಾಡಲಾಗುವುದು. ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.ಪ್ರೊ.ಶರಣಪ್ಪ ವಿ. ಹಲಸೆ, ಕುಲಪತಿ, ಕೆಎಸ್‌ಒಯು