ಜಿಲ್ಲೆ

ವಿದ್ಯಾರ್ಥಿಗಳ ಯಶಸ್ಸಿಗೆ ದಶ ಸೂತ್ರಗಳು

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರಿ ರೂಪಿಸಿಕೊಳ್ಳುವಿಕೆ, ಅವಕಾಶ ಹುಡುಕಿಕೊಳ್ಳುವಿಕೆ ಗುರಿಯೆಡೆಗೆ ಪ್ರಯತ್ನಿಸಲು ಬದ್ಧತೆ, ದೃಢತೆ, ಇತರ ಹತ್ತು ಸೂತ್ರಗಳನ್ನು ವಿದ್ಯಾರ್ಥಿಗಳು ಪಾಲಿಸಿದಲ್ಲಿ ಅವರು ಯಶಸ್ಸಿ ನೆಡೆಗೆ ಸಾಗಲು ಸಾಧ್ಯ ಎಂದು ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಂ.ಆರ್. ಈಶಣ್ಣ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ತಾಲೂಕಿನ ಅಮ್ಮಿನಭಾವಿಯ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ತಾವು ಇಟ್ಟುಕೊಂಡ ಗುರಿಯಿಂದ ವಿಚಲಿತರಾಗದೆ ಕಷ್ಟಪಟ್ಟು ಕ್ರೀಯಾಶೀಲರಾಗಿ ಯಶಸ್ಸು ಸಿಗುವವರೆಗೆ ಪ್ರಯತ್ನಿಸುತ್ತಲೇ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ನಿರ್ದೇಶಕ ಸುನೀಲ ಗುಡಿ ಮಾತನಾಡಿ, ಮೊಬೈಲ್, ಟಿ.ವಿಗಳಂತಹ ಮೋಹಗಳಿಗೆ ಒಳಗಾಗದೆ ಜೀವನ ರೂಪಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಘಟನೆ ವಿಶ್ಲೇಷಣೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಮಾಳಪ್ಪ ಅಮರಶೆಟ್ಟಿ, ಬಸವಣ್ಣೆಪ್ಪ ನವಲಗುಂದ, ಎಂ.ವಿ. ಹೊಸೂರ, ಹುಲಗೂರ, ಕರ್ಕಿ ಪ್ರಮಾಣಪತ್ರ ವಿತರಿಸಿದರು. ವೀರಣ್ಣ ಒಡ್ಡೀನ, ಆನಂದ ಅಮರಶೆಟ್ಟಿ, ಪರಪ್ಪ ಅಂತಕ್ಕನವರ, ಮಂಜುನಾಥ ದೊಡವಾಡ ನಿರ್ಣಾಯಕರಾಗಿದ್ದರು.
500ಕ್ಕೂ ಹೆಚ್ಚು ಶಾಲಾ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಕೌದಿ ನಿರೂಪಿಸಿದರು. ಸುಜಾತಾ ಹಡಗಲಿ ವಂದಿಸಿದರು.