ಜಿಲ್ಲೆ

ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುವುದೇ ಸವಾಲು

ಮೈಸೂರು: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸುವುದೇ ಸವಾಲಿನ ಕೆಲಸವಾಗಿದೆ ಎಂದು ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಎಚ್.ಎಂ.ರಾಜಶೇಖರ್ ಹೇಳಿದರು.

ಜಿಲ್ಲಾ ರಾಜ್ಯಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆ ವತಿಯಿಂದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ ಮತ್ತು ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದವಿ ಪೂರ್ವ ಹಂತದಲ್ಲಿ ವಿದ್ಯಾರ್ಥಿಗಳ ಮನಸ್ಸು ಚಂಚಲತೆಯಿಂದ ಕೂಡಿದ್ದು, ಅದನ್ನು ಉಪನ್ಯಾಸಕರಾದವರು ತರಗತಿಯಲ್ಲಿ ಹತೋಟಿಗೆ ತಂದು ಮನ ಮುಟ್ಟುವಂತೆ ಬೋಧಿಸಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವಾಗಬೇಕು ಎಂದರು. ಶಿಕ್ಷಕನಾದವನಿಗೆ ಬದ್ಧತೆ ಬಹಳ ಮುಖ್ಯ. ವಿದ್ಯಾರ್ಥಿಗಳೊಂದಿಗೆ ಒಡನಾಟ ಹಾಗೂ ಕಲಿಕೆಯಲ್ಲಿ ಪೂರಕ ವಾತಾವರಣ ನಿರ್ಮಿಸುವವನೇ ನಿಜವಾದ ಶಿಕ್ಷಕ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ ಮಾತನಾಡಿ, ಫಲಿತಾಂಶ ಹೆಚ್ಚಿಸುವಲ್ಲಿ ಕೈಪಿಡಿ ಅತ್ಯಂತ ಉಪಯುಕ್ತ. ಎಲ್ಲ ಅಧ್ಯಾಪಕರೂ ಕೈಪಿಡಿಯಲ್ಲಿರುವ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖರಾಗಬೇಕು. ಮುಂಬರುವ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಫಲಿತಾಂಶ ನೀಡುವಲ್ಲಿ ಶ್ರಮ ವಹಿಸಬೇಕೆಂದು ಅಭಿಪ್ರಾಯಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಮರಿಸ್ವಾಮಿ ಮಾತನಾಡಿ, ಉತ್ಸಾಹ, ಕ್ರಿಯಾಶೀಲತೆ, ಕಲ್ಪನಾಶಕ್ತಿಯನ್ನು ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಮೂಡಿಸುವಂತೆ ಉಪನ್ಯಾಸಕ ವೃಂದ ಕೈಜೋಡಿಸಬೇಕು. ಪ್ರತಿಯೊಬ್ಬ ಉಪನ್ಯಾಸಕರೂ ಇಂತಹ ವಿಶೇಷ ಕಾರ್ಯಾಗಾರಗಳಲ್ಲಿ ಭಾಗವಹಿಸಿದಾಗ ಹೆಚ್ಚು ವಿಷಯ, ಜ್ಞಾನ ಪಡೆದುಕೊಳ್ಳಬಹುದು ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎನ್.ಎಸ್. ಪಶುಪತಿ ಮಾತನಾಡಿ, ಒತ್ತಡದ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಪ್ರಮುಖವಾದ ಅಂಶ ಒದಗಿಸಿಕೊಡುವುದು ಸೂಕ್ತ. ರಾಜಕೀಯ ಪ್ರವೇಶ ಮಾಡುವವರಿಗೆ ರಾಜ್ಯಶಾಸ್ತ್ರ ಅಧ್ಯಯನ ಒಂದು ಅಡಿಪಾಯವಾಗಲಿದೆ. ವಿಷಯಜ್ಞಾನ ಹೆಚ್ಚಿದಂತೆ ವಿದ್ಯಾರ್ಥಿಗಳು ಜೀವನದಲ್ಲಿ ಬೆಳವಣಿಗೆ ಕಾಣಬಹುದು ಎಂದು ತಿಳಿಸಿದರು.

ನಿವೃತ್ತಿ ಹೊಂದಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಾದ ಜಗದೀಶ್, ಬಿ.ಪುಟ್ಟಸ್ವಾಮಿ, ಪುಟ್ಟಸ್ವಾಮಿ, ದೇವರ ಬೈಯಣ್ಣ ಅವರನ್ನು ಸನ್ಮಾನಿಸಲಾಯಿತು. ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್, ತಿ.ನರಸೀಪುರ ತಲಕಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ. ಬಿ.ನಾಗರತ್ನಮ್ಮ, ವೇದಿಕೆಯ ಕಾರ್ಯದರ್ಶಿ ಶಿವರಾಜ್, ಖಜಾಂಚಿ ಎ.ಸಿ. ತರಣಿಕುಮಾರ್, ಉಪನ್ಯಾಸಕ ಎಚ್.ಸಿ.ಕಾಳಿಪ್ರಸಾದ್ ಉಪಸ್ಥಿತರಿದ್ದರು.