ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿ

ಕನಕಗಿರಿ(ಕೊಪ್ಪಳ): ಗುರುಗಳು ದೀಪದ ಸ್ತಂಭಗಳಿದ್ದಂತೆ. ತಮ್ಮ ಶಿಷ್ಯರಿಗೆ ಬೆಳಕಿನ ದಾರಿ ತೋರಿ, ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಮಾರ್ಗದರ್ಶಕರಾಗಿರುತ್ತಾರೆ ಎಂದು ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಭಜರಂಗಬಲಿ ಹೇಳಿದರು.


ಮಂಗಳವಾರದಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.


ಸೆ.5 ಎಂದರೆ ನಮ್ಮನ್ನು ತಿದ್ದಿ ತೀಡಿ, ಜೀವನದ ದಾರಿಯನ್ನು ತೋರಿಸಿದ ಗುರುಗಳನ್ನು ಸ್ಮರಿಸುವ ದಿನ. ಸುಂದರ, ಆರೋಗ್ಯವಂತ ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.


ಸಹಾಯಕ ಪ್ರಾಧ್ಯಾಪಕ ಮರ್ವಿನ್ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳ ಒಳಿತಿಗಾಗಿ ತ್ಯಾಗ ಮನೋಭಾವನೆಯ ಶಿಕ್ಷಕರು ನಮ್ಮ ಸಮಾಜದಲ್ಲಿದ್ದಾರೆ. ಶಿಕ್ಷಕರ ದಿನಾಚರಣೆ ದಿನದಂದು ಮಾತ್ರ ಸಾಂಕೇತಿಕ ಆಚರಣೆಯಾಗಬಾರದು. ಶಿಕ್ಷಣದ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಶಿಷ್ಯರ ಸಂಬಂಧವನ್ನು ಪುನರ್ ಪ್ರತಿಷ್ಠಾಪಿಸಬೇಕಾದ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಶಿಕ್ಷಕರ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.


ಸಹಾಯಕ ಪ್ರಾಧ್ಯಾಪಕರಾದ ತಬಸ್ಸುಮ್ ಆರಾ, ಡಾ.ಆಶಿಕಾ ಎಚ್.ಸಿ, ಲಲಿತಾ ಎನ್. ಕಿನ್ನಾಳ ಸೇರಿ ಇತರರು ಇದ್ದರು.