ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-22ನೇ ಸಾಲಿನ ಎಡತೊರೆ 24ನೇ ವಾರ್ಷಿಕ ಸಂಚಿಕೆಯನ್ನು ಪ್ರಾಂಶುಪಾಲ ಡಾ.ಎ.ಆರ್.ಮದನ್‌ಕುಮಾರ್ ಬಿಡುಗಡೆ ಮಾಡಿದರು. ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ.ಕೆ.ಸಿ.ವೀರಭದ್ರಯ್ಯ, ಡಾ.ಎನ್.ನಾಗರಾಜ್, ಎಚ್.ಆರ್.ಸಿದ್ದೇಗೌಡ, ಎಂ.ಎಲ್.ಶ್ರೀನಾಥ್, ಸಿದ್ದೇಗೌಡ, ಡಾ.ಎಚ್.ಆರ್.ಚಂದ್ರಕಲಾ, ಡಾ.ಎಸ್.ಎಂ.ಕಲಾಶ್ರೀ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳ ಕಲೆ, ಕೌಶಲ ಗುರುತಿಸಿ ಪ್ರೋತ್ಸಾಹಿಸಿ

ಕೆ.ಆರ್.ನಗರ: ವಿದ್ಯಾರ್ಥಿಗಳ ಕಲೆ, ಕೌಶಲವನ್ನು ಹೊರತರಲು ಸಾಂಸ್ಕೃತಿಕ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಆರ್.ಮದನ್‌ಕುಮಾರ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜಿನ 2021-22ನೇ ಸಾಲಿನ ಎಡತೊರೆ 24ನೇ ವಾರ್ಷಿಕ ಸಂಚಿಕೆ ಬಿಡಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜತೆಗೆ ಕಲೆ, ಕ್ರೀಡೆ, ಸಾಹಿತ್ಯದ ಜ್ಞಾನವನ್ನು ಪಡೆದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಹಾಯವಾಗುತ್ತದೆ ಎಂದರು.

ನಮ್ಮ ಕಾಲೇಜಿನಲ್ಲಿ ನುರಿತ ಉಪನ್ಯಾಸಕರ ತಂಡ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೋಧನೆಯ ಸಾಮಗ್ರಿಗಳು ಹಾಗೂ ವಿಶಾಲವಾದ ಕಾಲೇಜು ಕಟ್ಟಡ, ಉತ್ತಮವಾದ ಗ್ರಂಥಾಲಯ ಸೇರಿದಂತೆ ಕಲಿಕೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡಬೇಕು. ಮುಂಬರುವ ದಿನಗಳಲ್ಲಿ ನಮ್ಮ ಕಾಲೇಜು ನ್ಯಾಕ್‌ಗೆ ಒಳಪಡುವಂತೆ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಸಹಕಾರಿಸುವಂತೆ ಮನವಿ ಮಾಡಿದರು.

ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ.ಕೆ.ಸಿ.ವೀರಭದ್ರಯ್ಯ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಮಾರುಹೋಗದೆ ವಿದ್ಯೆ ಕಡೆ ಗಮನ ಹರಿಸಿ ನಿಮ್ಮ ಪೋಷಕರು ನಿಮ್ಮ ಮೇಲೆ ಇಟ್ಟಿರುವ ಆಶೋತ್ತರಗಳಿಗೆ ಮತ್ತು ಕಾಲೇಜಿಗೆ ಗೌರವ ತರುವಂತಹ ಸಾಧನೆ ಮಾಡಿದರೇ ನಿಮ್ಮ ಮುಂದಿನ ಜೀವನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದರು.

ಪ್ರಾಧ್ಯಾಪಕರಾದ ಡಾ.ಎಚ್.ಆರ್.ಚಂದ್ರಕಲಾ, ಡಾ.ಎಸ್.ಎಂ.ಕಲಾಶ್ರೀ, ಚಿಕ್ಕಮಗಳೂರು ಗಣೇಶ್, ಕಾಲೇಜು ಸದಸ್ಯ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿದರು. ಕಾಲೇಜಿನ ಎಡತೊರೆ 24ನೇ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ವಿಶ್ರಾಂತ ಪ್ರಾಂಶುಪಾಲ ಡಾ.ಎನ್.ನಾಗರಾಜ್, ವಿಶ್ರಾಂತ ಪ್ರಾಧ್ಯಾಪಕ ಎಚ್.ಆರ್.ಸಿದ್ದೇಗೌಡ, ವಿಶ್ರಾಂತ ಉಪನಿರ್ದೇಶಕ ಎಂ.ಎಲ್.ಶ್ರೀನಾಥ್, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸಿದ್ದೇಗೌಡ, ಕಾಲೇಜು ವ್ಯವಸ್ಥಾಪಕ ಎಂ.ರಘು, ಅತಿಥಿ ಉಪನ್ಯಾಸಕ ರಘು, ಸಿಡಿಸಿ ಸದಸ್ಯ ಮಲ್ಲಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.