ಮೈಸೂರು: ವಿದ್ಯಾರ್ಥಿಗಳ ಕನಸುಗಳನ್ನು ಮೊಬೈಲ್ ಹೊಸಕಿ ಹಾಕುತ್ತಿದೆ ಎಂದು ಯುವ ಉದ್ಯಮಿ ಡಾ.ಶ್ವೇತಾ ಮಡಪ್ಪಾಡಿ ಕಳವಳ ವ್ಯಕ್ತಪಡಿಸಿದರು.
ಮೈಸೂರು ತಾಲೂಕಿನ ದೇವಲಾಪುರದ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2022ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನವೆಂಬುದು ತಪಸ್ಸಾಧನೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಗೌರವ ತಪಸ್ವಿ ಎಂದು ಕುವೆಂಪು ಹೇಳಿದ್ದಾರೆ. ಆದರೆ, ವಿದ್ಯಾರ್ಥಿ ಜೀವನದ ಅನುಭವಗಳನ್ನೆಲ್ಲ ಮೊಬೈಲ್ ಎಂಬ ಮಹಾಮಾರಿ ನುಂಗಿ ಹಾಕಿದೆ. ಹಿಂದೆಂದೂ ಎದುರಿಸದಷ್ಟು ಅಡೆತಡೆಗಳು, ಏಕಾಗ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಮಾಡುವ ಅಪರಾಧಗಳಿಗೆ ಸಮಾಜವೇ ಹೊಣೆಯಾಗಿರುತ್ತದೆ. ಹಿಂದೆ ಕಳ್ಳರಿದ್ದರು, ಸುಳ್ಳರಿದ್ದರು. ಆದರೆ ಇಷ್ಟರಮಟ್ಟಿಗೆ ಕೊಲೆಗಡುಕರಿರಲಿಲ್ಲ. ಇಂದು ಓದುವ ವಿದ್ಯಾರ್ಥಿಗಳು ಚಾಕು ಹಿಡಿಯುತ್ತಿದ್ದಾರೆ, ಮಚ್ಚು ಹಿಡಿಯುತ್ತಿದ್ದಾರೆ, ಅತ್ಯಾಚಾರಿಗಳಾಗುತ್ತಿದ್ದಾರೆ. ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ ಕಾರಣ ಮನಸುಗಳು ಕಲ್ಮಶಗೊಳ್ಳುತ್ತಿವೆ. ಕ್ರೌರ್ಯ ರೂಢಿಸಿಕೊಳ್ಳುತ್ತಿದ್ದಾರೆ. ಕ್ರೌರ್ಯದ ಭಿನ್ನ ರೂಪಗಳು ಮೊಬೈಲ್‌ಗಳ ಮುಖಾಂತರ ಯುವಮನಸ್ಸುಗಳನ್ನು ಪ್ರಭಾವಿಸುತ್ತಿವೆ. ಕೊಲೆ-ಹಿಂಸೆ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಪಾಠದ ಹಾಗೆ ಕಿವಿಗೆ ಅಪ್ಪಳಿಸುತ್ತವೆ. ಯುವಜನಾಂಗದ ಭವಿಷ್ಯ, ಮಾನವೀಯತೆಯ ಭವಿಷ್ಯವನ್ನೇ ಹಾಳುಗೆಡವುತ್ತಿದೆ ಎಂದು ಹೇಳಿದರು.
ಹಿಂದೆ ಯುವಜನತೆ ಸಾಹಿತ್ಯದತ್ತ ಆಕರ್ಷಿತರಾಗುತ್ತಿದ್ದರು. ಭಾಷೆ ಅಥವಾ ಸಾಹಿತ್ಯ ಪರಸ್ಪರ ಮನುಷ್ಯ-ಮನುಷ್ಯನನ್ನು ಗೌರವಿಸುವುದನ್ನು ಕಲಿಸುತ್ತದೆ. ಪರಸ್ಪರ ಪ್ರೀತಿಸುವುದನ್ನು ಕಲಿಸುತ್ತದೆ. ಆದರೆ, ಈಗ ಸಾಹಿತ್ಯದ ಪಾಠ ಹೇಳುವವರೂ ಪರಸ್ಪರ ಜಗಳವಾಡುವುದಕ್ಕೆ ಮಾದರಿಯಾಗುತ್ತಿದ್ದಾರೆ ಎಂದರು.
ಈಗ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದನ್ನು ಧ್ಯಾನಿಸುತ್ತೇವೆಯೋ ಅದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ, ದೊಡ್ಡ ಕನಸನ್ನು ಕಾಣಬೇಕು. ಚಂಚಲತೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಯೋಗ ತರಬೇತುದಾರ ರಾಜಶೇಖರಮೂರ್ತಿ, ಮುಖ್ಯೋಪಾಧ್ಯಾಯ ಎಚ್.ಕ್ಯಾತ ಇನ್ನಿತರರು ಇದ್ದರು.