ಜಿಲ್ಲೆ

ವಿದ್ಯಾರ್ಥಿ ವೇತನ ಕಡಿತಕ್ಕೆ ಆಕ್ರೋಶ

ಚಿತ್ರದುರ್ಗ: ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿ ವೇತನ ಕಡಿತ, ಕಾನೂನು ವಿವಿಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚಿಸಿರುವ ಕ್ರಮ ವಿರೋಧಿಸಿ ನೂರಾರು ಕಾನೂನು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಕಾಲಕ್ಕೆ ವಿದ್ಯಾರ್ಥಿ ವೇತನ ಪಾವತಿಗೆ ಕ್ರಮಕೈಗೊಳ್ಳುವುದು ಸೇರಿ ವಿವಿಧ ಬೇಡಿಕೆಗೆ ಸ್ಪಂದಿಸುವಂತೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ವಿದ್ಯಾರ್ಥಿ ವೇತನ ನೇರವಾಗಿ ಎಸ್‌ಎಸ್ಪಿ ಲಾಗಿನ್ ಅಡಿಯಲ್ಲಿ ಪಡೆಯುತ್ತಿದ್ದು, ಈ ಕಾರಣದಿಂದ ಪರೀಕ್ಷಾ ಶುಲ್ಕ ಹೆಚ್ಚುವರಿ ಕಟ್ಟಿಸಿಕೊಳ್ಳಬೇಕೆಂಬ ಸೂಚನೆ ಕಾಲೇಜುಗಳಿಗೆ ನೀಡಲಾಗಿದೆ. ಆದರೆ, ವಿವಿ ದುಪ್ಪಟ್ಟು ಮಾಡಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾನೂನು ವಿಶ್ವವಿದ್ಯಾಲಯವೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಪರೀಕ್ಷಾ ಶುಲ್ಕಕ್ಕಿಂತ 5 ಪಟ್ಟು ಹೆಚ್ಚುವರಿ ಮಾಡಿ ಆದೇಶಿಸಿದ್ದು, ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿ ವೇತನ ಪೂರ್ಣ ಪ್ರಮಾಣದಲ್ಲಿ ಸಕಾಲಕ್ಕೆ ನೀಡದೆ, ಇಲಾಖೆ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಅರ್ಹರೆಲ್ಲರಿಗೂ ಸಮಾನವಾಗಿ ಪಾವತಿಯಾಗುತ್ತಿಲ್ಲ. ಸಚಿವರು ಇತ್ತ ಗಮನಹರಿಸಿ ಸಕಾಲದಲ್ಲಿ ವಿದ್ಯಾರ್ಥಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು, ನಿರುದ್ಯೋಗಿ ಪದವೀಧರರು ಕಾನೂನು ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕಾರಣ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡಿಕೊಡಬೇಕು ಎಂದು ಕೋರಿದರು.