ಜಿಲ್ಲೆ

ವಿದ್ಯಾರ್ಥಿ ನಿಲಯಕ್ಕೆ ಕಾಂಪೌಂಡ್ ನಿರ್ಮಾಣ

ಬೇಲೂರು: ಯಗಚಿ ನದಿ ಸಮೀಪವಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಂಪೌಂಡ್, ಉದ್ಯಾನವನ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

ಪಟ್ಟಣದ ಯಗಚಿ ನದಿ ಸಮೀಪವಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಸುತ್ತಲಿನ ಕಾಂಪೌಂಡ್ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ಬೇಲೂರಿಗೆ ಆಗಮಿಸಿದ ಸಂದರ್ಭ ವಿದ್ಯಾರ್ಥಿ ನಿಲಯದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಅನುದಾನಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯಿಂದ 60 ಲಕ್ಷ ರೂ.ಮಂಜೂರು ಮಾಡಿದ್ದಾರೆ. ಜತೆಗೆ ಬೇಲೂರು ಪ್ರವಾಸಿ ತಾಣವಾಗಿದ್ದು, ಪಟ್ಟಣ ಪ್ರವೇಶದಲ್ಲೇ ವಿದ್ಯಾರ್ಥಿ ನಿಲಯವಿದೆ. ಆದ್ದರಿಂದ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲಬೂತ ಸೌಲಭ್ಯ ಕಲ್ಪಿಸಲಾಗುವುದು. ಮತ್ತು ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಉದ್ಯಾನವನ ನಿರ್ಮಿಸಿ ವಿದ್ಯಾರ್ಥಿಗಳು ಉತ್ತಮ ಪರಿಸರದಲ್ಲಿ ಆರೋಗ್ಯಕರವಾಗಿ ಇರಬೇಕೆಂದು ಕೆಲಸ ಮಾಡಿಸಲಾಗುತ್ತಿದೆ. ಇದರ ಜತೆಗೆ ವಿದ್ಯಾರ್ಥಿ ನಿಲಯಕ್ಕೆ ಸೇರಿದ ಜಾಗ ಒತ್ತುವರಿಯಾಗಿತ್ತು. ಅದನ್ನು ಬಿಡಿಸಿದ್ದೇವೆ. ಮತ್ತು ಸರ್ಕಾರಿ ಜಾಗವನ್ನು ಯಾರೇ ಬಲಾಢ್ಯರು ಒತ್ತುವರಿ ಮಾಡಿದ್ದರೂ ಅದನ್ನು ಬಿಡಿಸಿ ಸರ್ಕಾರದ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಕೆಆರ್‌ಐಡಿ ಇಇ ಅಣ್ಣಯ್ಯ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ 60 ಲಕ್ಷ ರೂ.ನಲ್ಲಿ ವಿದ್ಯಾರ್ಥಿ ನಿಲಯದ ಸುತ್ತಲೂ 2.3 ಮೀಟರ್ ಎತ್ತರದಲ್ಲಿ 160 ಮೀಟರ್ ಉದ್ದದ ಕಾಂಪೌಂಡ್ ನಿರ್ಮಿಸಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಲಿದ್ದೇವೆ ಎಂದರು.

ತಾಪಂ ಇಒ ವಸಂತಕುಮಾರ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಪ್ರಕಾಶ್, ಸಿಬ್ಬಂದಿ ಸತೀಶ್, ಅಭಿ, ತಾಪಂ ಮಾಜಿ ಸದಸ್ಯರಾದ ಪರ್ವತಯ್ಯ, ಮಂಜುನಾಥ್, ಪುರಸಭೆ ಮಾಜಿ ಸದಸ್ಯ ಮಂಜುನಾಥ್, ದಲಿತ ಮುಖಂಡರಾದ ಮರಿಯಪ್ಪ, ಕುಮಾರ್, ಲಕ್ಷ್ಮಣ್, ಸ್ವಾಮಿ ಇತರರಿದ್ದರು.