ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕ್ರೀಡಾ, ಎನ್‌ಎಸ್‌ಎಸ್ ರೋವರ್ಸ್ ಮತ್ತು ರೇಂಜರ್ಸ್ ಯುವ ರೆಡ್‌ಕ್ರಾಸ್ ಘಟಕಗಳನ್ನು ಶಾಸಕ ಕೆ.ಎಸ್.ಆನಂದ್, ಬಿ.ಟಿ.ಲಲಿತಾನಾಯ್ಕ ಉದ್ಘಾಟಿಸಿದರು. ತೋಟದಮನೆ ಮೋಹನ್‌ಕುಮಾರ್, ಡಾ. ಕೆ.ಎ.ರಾಜಣ್ಣ, ತಿಮ್ಮರಾಜು ಇತರರಿದ್ದರು. 
ಜಿಲ್ಲೆ

ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ಕೊಡಿ

ಕಡೂರು: ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಗೊಳ್ಳಲು ಕಾಲೇಜು ಜೀವನದಲ್ಲಿ ಬೆಳೆಸಿಕೊಂಡ ನಾಯಕತ್ವ ಗುಣ ಸಹಕಾರಿಯಾಯಿತು ಎಂದರು.

ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲು ಪರ್ಯಾಯವಾಗಿ 5 ಎಕರೆ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲಿಯೇ ಜಾಗ ಮಂಜೂರಾತಿ ದೊರೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಬಿ.ಟಿ.ಲಲಿತಾನಾಯ್ಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಲ್ಲರನ್ನೂ ಪ್ರೀತಿಸಿ, ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಯುವಪೀಳಿಗೆಯು ಸಮಯಕ್ಕೆ ಹೆಚ್ಚು ಮಹತ್ವ ನೀಡಿದರೆ ಭವಿಷ್ಯದ ದಿನಗಳು ಉತ್ತಮಗೊಳ್ಳುತ್ತವೆ ಎಂದು ಹೇಳಿದರು.

ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ದುಶ್ಚಟಗಳಿಗೆ ಮಾರುಹೋಗದೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ರ‌್ಯಾಂಕ್ ಪಡೆದ 18 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎ.ರಾಜಣ್ಣ, ಎಸ್.ಕುಮಾರ, ಜಿ.ತಿಮ್ಮರಾಜು, ಎಚ್.ಆರ್.ಜ್ಯೋತಿ, ವೈ.ಜಿ.ಸಂಪತ್‌ಕುಮಾರ್, ಎ.ನಾಗೇಶ್, ಎಚ್.ಎಸ್.ಸವಿತಾ, ಬಸವರಾಜ್ ಭಂಡಾರಿ, ಗೋಪಿನಾಥ್ ಇತರರಿದ್ದರು.