ಜಿಲ್ಲೆ

ವಿದ್ಯಾನಗರಕ್ಕೆ ಶಾಂತಿಸಾಗರದ ನೀರು ಪೂರೈಸಿ

ಚಿತ್ರದುರ್ಗ: ವಿದ್ಯಾನಗರ ಬಡಾವಣೆಗೆ ಶಾಂತಿಸಾಗರದ ನೀರು ಪೂರೈಸಲು ಜಿಲ್ಲಾಡಳಿತ, ನಗರಸಭೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ವೆಂಕಟೇಶ್‌ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಗೌರವಾಧ್ಯಕ್ಷ ಜೆ.ಪರಶುರಾಮ ಮಾತನಾಡಿ, ಬಡಾವಣೆಯಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಆರಂಭದಲ್ಲಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ನೀರಿನ ಟ್ಯಾಂಕ್‌ನಿಂದ ಪೂರೈಸಲಾಗುತ್ತಿತ್ತು. ಆದರೆ, 2009ರಲ್ಲಿ ನಿರ್ವಹಣೆ ಸಂಬಂಧ ನಗರಸಭೆಗೆ ಹಸ್ತಾಂತರಿಸಲಾಯಿತು. ಅಂದಿನ ಅಧ್ಯಕ್ಷರು ಬಡಾವಣೆ ಮೆದೇಹಳ್ಳಿ ಗ್ರಾಪಂಗೆ ಸೇರಿದ್ದು, ಎಂಬ ಕಾರಣಕ್ಕೆ ನಾವೇಕೆ ವೆಚ್ಚ ಭರಿಸಬೇಕೆಂದು ಸರಬರಾಜು ಮಾಡುವ ನೀರಿನ ಸಂಪರ್ಕ ಕಡಿತಗೊಳಿಸಿದರು ಎಂದು ಮಾಹಿತಿ ನೀಡಿದರು.

ಜಿಲ್ಲಾಡಳಿತಕ್ಕೆ, ಗ್ರಾಪಂಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೆದೇಹಳ್ಳಿ ಗ್ರಾಪಂಗೆ ಸೇರಿದ ಬ್ಯಾಂಕ್ ಕಾಲನಿಗೆ ಶಾಂತಿಸಾಗರದ ನೀರು ಪೂರೈಕೆಯಾಗುತ್ತಿದೆ. ಆದರೆ, ನಮ್ಮ ಬಡಾವಣೆಯ ಜನರನ್ನು ಈ ನೀರಿನಿಂದ ವಂಚಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಸಂಘದ ಅಧ್ಯಕ್ಷ ಜಿ.ಆರ್.ಪ್ರತಾಪ್‌ರೆಡ್ಡಿ ಮಾತನಾಡಿ, ನಮ್ಮ ಬಡಾವಣೆಯ ಕೊಳವೆಬಾವಿಗಳಲ್ಲಿ ನೈಟ್ರೇಡ್ಸ್, ಸಲ್ಫೇಟ್ ಸೇರಿ ವಿಷಪೂರಿತ ಅನಿಲಗಳು ನೀರಿನೊಂದಿಗೆ ಬರುತ್ತಿವೆ. ಬಡಾವಣೆಯ ಉತ್ತರ ದಿಕ್ಕಿನ ಮಲ್ಲಾಪುರ ಕೆರೆಗೆ ಚಿತ್ರದುರ್ಗ ನಗರದ ಯುಜಿಡಿ ಮೂಲಕ ಕಲುಷಿತ ನೀರು ಸೇರುತ್ತಿದ್ದು, ಮಲೀನಗೊಂಡಿದೆ. ಈ ನೀರು ಬಳಸಲು, ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಶಾಂತಿಸಾಗರದ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಮಲ್ಲಾಪುರ ಕೆರೆಯ ಮಲೀನ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಲು ಸಂಸ್ಕರಣ ಘಟಕವನ್ನು ನಿರ್ಮಿಸಿ, ಆನಂತರವೇ ಕೆರೆಗೆ ಬಿಡಬೇಕು. ಇಲ್ಲದಿದ್ದರೆ, ಮರು ಉಪಯೋಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಸಂಘದ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಮಾಜಿ ಉಪಾಧ್ಯಕ್ಷ ಪ್ರಕಾಶ್‌ರೆಡ್ಡಿ, ಮಾಜಿ ಕಾರ್ಯದರ್ಶಿ ಜ್ಞಾನಮೂರ್ತಿ, ಖಜಾಂಚಿ ಮುಕುಂದ್‌ರೆಡ್ಡಿ ಇತರರಿದ್ದರು.