ಬೆಂಗಳೂರು ಗ್ರಾಮಾಂತರ: ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದರೂ ಮಕ್ಕಳನ್ನು ಕಲಿಕೆಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ರೂಪಿಸಿರುವ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ನಡೆಯುತ್ತಿದೆ.
ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ಶಿಕ್ಷಣ ಬಿರುಸು ಪಡೆಯುತ್ತಿದ್ದಂತೆ ಕಲಿಕೆಯಿಂದ ಸರ್ಕಾರಿ ಶಾಲೆ ಮಕ್ಕಳು ಹಿಂದುಳಿಯುತ್ತಿರುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಈ ಯೋಜನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸಿದ್ಧತೆ ಆರಂಭವಾಗಿದೆ. ಶಾಲೆಗಳು ಮರು ಆರಂಭಗೊಳ್ಳುವವರೆಗೆ ಆಯಾ ಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳಲ್ಲಿ ಕಲಿಕೆ ಮುಂದುವರಿಸಲು ಶಿಕ್ಷಕರನ್ನು ಸಿದ್ಧಗೊಳಿಸಲಾಗುತ್ತಿದೆ.
ಪಠ್ಯಪುಸ್ತಕ ವಿತರಣೆ: ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕಾ ತಂತ್ರ ರೂಪಿಸಲು ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಸೇರಿ ಎಲ್ಲ ಬಗೆಯ ಕಲಿಕಾ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಕಾರ್ಯ ಆರಂಭಿಸಲಾಗಿದೆ. ಶಿಕ್ಷಕರು, ಶಾಲಾ ಉಸ್ತುವಾರಿ ಸಮಿತಿ ಸದಸ್ಯರು, ಸ್ವಯಂ ಸೇವಕರು ಹಾಗೂ ಪಾಲಕರನ್ನು ಈ ಯೋಜನೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸಲಾಗುತ್ತಿದೆ.
ಮಾರ್ಗದರ್ಶಿ ಶಿಕ್ಷಕರ ನೇಮಕ: ಪ್ರತಿ ಶಾಲಾ ವ್ಯಾಪ್ತಿಯಲ್ಲಿ 20 ರಿಂದ 25 ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಲಾಗುವುದು. ವಿದ್ಯಾರ್ಥಿಗಳು ವಾಸವಿರುವ ಸ್ಥಳ ಆಧರಿಸಿ ಅಂಥ ಮಕ್ಕಳನ್ನು ಒಗ್ಗೂಡಿಸಿ ಅವರಿಗೆ ಮಾರ್ಗದರ್ಶಿ ಶಿಕ್ಷಕರ ಮೂಲಕ ಕಲಿಕೆ ಆರಂಭಿಸಲಾಗುವುದು. ಇಂಥ ಶಿಕ್ಷಕರು ನೆರೆ-ಹೊರೆಯ ಮಕ್ಕಳನ್ನು ಒಗ್ಗೂಡಿಸಿ ಚಿಕ್ಕ ತಂಡ ರೂಪಿಸಿ ನೆರೆ-ಹೊರೆ ಗುಂಪು ಎಂಬ ಹೆಸರಿನಲ್ಲಿ ಕಲಿಕೆ ಆರಂಭಿಸುವುದು ಯೋಜನೆ ಉದ್ದೇಶ.
ಮೂರು ವಿಭಾಗದಲ್ಲಿ ಕಲಿಕೆ: * ಇಂಟಲಿಜೆಂಟ್ ಕೋಣೆ: ಇಂಟರ್‌ನೆಟ್ ಸಹಿತ ಕಂಪ್ಯೂಟರ್, ಟ್ಯಾಬ್, ಸ್ಮಾರ್ಟ್‌ೆನ್ ಹೊಂದಿರುವ ಕೋಣೆಯೊಂದಿಗೆ ಮಾರ್ಗದರ್ಶಿ ಶಿಕ್ಷಕರು ತಂತ್ರಜ್ಞಾನ ಬಳಸಿ ವೆಬಿನಾರ್ ಮೂಲಕ ಬೋಧನೆ ಮಾಡುವುದು.
*ಬ್ರಿಲಿಯಂಟ್ ಕೋಣೆ: ಇಂಟರ್‌ನೆಟ್ ರಹಿತ ಮೊಬೈಲ್ ಹೊಂದಿರುವ ಕೋಣೆ ಇದು. ಮೊಬೈಲ್‌ಗಳು ಪಾಲಕರದ್ದಾಗಿರುವುದರಿಂದ ಪಾಲಕರು ಕೆಲಸಕ್ಕೆ ಹೋಗಿ ಬರುವ ವೇಳೆ ಹೊರತುಪಡಿಸಿ ಬೆಳಗ್ಗೆ 9ರವರೆಗೆ ಹಾಗೂ ಸಂಜೆ 6ರ ಬಳಿಕ ಮಕ್ಕಳಿಗೆ ಬೋಧನೆ ಮಾಡುವುದು. ಬೆಳಗ್ಗೆ 9ಕ್ಕೆ ಮುನ್ನ ಎಸ್‌ಎಂಎಸ್ ಮೂಲಕ ಆ ದಿನ ಮಾಡಬೇಕಾದ ಚಟುವಟಿಕೆಗಳನ್ನು ಸೂಚಿಸುವುದು. ವಾಯ್ಸ ಮೆಸೇಜ್ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುವುದು.
*ಜೀನಿಯಸ್ ಕೋಣೆ: ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳಿರದ ಕೋಣೆ ಇದು. ನೆರೆ-ಹೊರೆ ಗುಂಪುವಾರು ಮಕ್ಕಳನ್ನು ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಡ್ಡಾಯವಾಗಿ ಭೇಟಿ ಮಾಡಿ ಮುಂದಿನ ವಾರದ ವೇಳಾಪಟ್ಟಿ ನೀಡುವುದು. ಸ್ವಯಂ ಕಲಿಕೆಗೆ ಪೂರಕವಾದ ಮಾರ್ಗದರ್ಶನ ನೀಡುವುದು. ಹಿಂದಿನ ವಾರದ ವೇಳಾಪಟ್ಟಿಯಂತೆ ಕಲಿಕಾ ಪ್ರಗತಿ ಗಮನಿಸಿ ಸಂಶಯಗಳಿದ್ದರೆ ಅದನ್ನು ಬಗೆಹರಿಸುವುದು.
ಕರೊನಾ ನಿಯಮ ಪಾಲನೆ ಕಡ್ಡಾಯ: ವಿದ್ಯಾಗಮ ಯೋಜನೆಯಡಿ ಕಲಿಕಾ ಕಾರ್ಯಕ್ರಮ ರೂಪಿಸಿದ್ದರೂ ಕಡ್ಡಾಯವಾಗಿ ಎಲ್ಲರೂ ಕರೊನಾ ನಿಯಮ ಪಾಲಿಸಬೇಕು. ಮುಖ್ಯವಾಗಿ ಪರಸ್ಪರ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ದಾಖಲಾತಿ ಆರಂಭ: ಈಗಾಗಲೇ ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣ ಆರಂಭಿಸಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿವೆ. ಜತೆಗೆ ದಾಖಲಾತಿ ಆರಂಭಿಸಿವೆ. ಏತನ್ಮಧ್ಯೆ ಸರ್ಕಾರಿ ಶಾಲೆ ಮಕ್ಕಳು ಪ್ರಸಕ್ತ ವರ್ಷದಲ್ಲಿ ಶಾಲೆ ಬಿಟ್ಟು ಹೋಗುವ ಆತಂಕವಿದ್ದು, ಸರ್ಕಾರಿ ಶಾಲೆಯಲ್ಲಿಯೂ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಕ್ಕೆ ಮಾರ್ಗದರ್ಶಿ ಶಿಕ್ಷಕರು 6 ರಿಂದ 14 ವರ್ಷದವರೆಗಿನ ಎಲ್ಲ ವಯೋಮಾನದವರಿಗೂ ದಾಖಲಾತಿ ಆಂದೋಲನದ ಮೂಲಕ ಶಾಲೆಗೆ ದಾಖಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯಬಾರದೆಂಬ ಉದ್ದೇಶದಲ್ಲಿ ಸರ್ಕಾರ ವಿದ್ಯಾಗಮ ಯೋಜನೆ ರೂಪಿಸಿದೆ. ಇದನ್ನು ಸಮರ್ಪಕವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಪೂರ್ವ ಸಿದ್ಧತೆ ನಡೆದಿದೆ. ಇದಕ್ಕಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಅಗತ್ಯ ಕ್ರಮಕೈಗೊಳ್ಳಲಾಗುವುದು. ಗಂಗಮಾರೇಗೌಡ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ