ಸಂತೋಷ ಮುರಡಿ ಮುಂಡರಗಿ
ಬಡ ಮಕ್ಕಳ ಪಾಲಿಗೆ ಸರ್ಕಾರಿ ಶಾಲೆಗಳೇ ಪ್ರಮುಖ ಆಧಾರ. ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ. ಆದರೆ, ತಾಲೂಕಿನ ಹಲವು ಶಾಲೆಗಳು ಮಾತ್ರ ಇಂದಿಗೂ ನೀರು, ಸೂರು, ಶೌಚಗೃಹ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಯಿಂದ ಗರ ಬಡಿದಂತಾಗಿವೆ.
ತಾಲೂಕಿನಲ್ಲಿ 23 ಕಿರಿಯ ಪ್ರಾಥಮಿಕ, 76 ಹಿರಿಯ ಪ್ರಾಥಮಿಕ ಹಾಗೂ 17 ಸರ್ಕಾರಿ ಪ್ರೌಢಶಾಲೆಗಳಿವೆ. ಈ ಪೈಕಿ 5 ಕಿರಿಯ ಪ್ರಾಥಮಿಕ ಶಾಲೆಯ 8 ಕೊಠಡಿಗಳು ದುರಸ್ತಿಯಲ್ಲಿವೆ. 34 ಹಿರಿಯ ಪ್ರಾಥಮಿಕ ಶಾಲೆಗಳ 52 ಕೊಠಡಿಗಳು ಸಂಪೂರ್ಣ ದುರಸ್ತಿ ಮಾಡುವ ಅಗತ್ಯವಿದೆ. ಈ ಶಾಲೆಗಳಲ್ಲಿ ಸಮರ್ಪಕವಾಗಿ ಶೌಚಗೃಹಗಳಿಲ್ಲದ ಕಾರಣ ವಿದ್ಯಾರ್ಥಿನಿಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹಲವಾರು ಶಾಲೆಗಳಲ್ಲಿ ಮೇಲ್ಛಾವಣೆ, ಕಿಟಕಿ, ಬಾಗಿಲು ದುರಸ್ತಿಯಲ್ಲಿದ್ದರೆ, ಕೆಲವೆಡೆ ಗೋಡೆಗಳು ಬಿರುಕು ಬಿಟ್ಟು ಆತಂಕ ಮೂಡಿಸಿವೆ. ಕೊಠಡಿಗಳ ಮೇಲ್ಛಾವಣೆ ಕಿತ್ತುಹೋಗಿರುವುದರಿಂದ ಮಳೆ ಸುರಿದರೆ ಸಾಕು ಕೊಠಡಿ ಸೋರುತ್ತವೆ. ಇದರಿಂದ ಮಕ್ಕಳು ಕೊಠಡಿಯೊಳಗೆ ಕುಳಿತು ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಹಲವೆಡೆ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.
ಬೀಡನಾಳ ತಾಂಡಾದ ಸರ್ಕಾರಿ ಶಾಲೆಯಲ್ಲಿ 1ರಿಂದ 6ನೇ ತರಗತಿಯವರೆಗಿದೆ. ಇಲ್ಲಿ ಒಟ್ಟು 5 ಕೊಠಡಿಗಳಿದ್ದು, 1 ಕೊಠಡಿ ಶಿಥಿಲಗೊಂಡಿದ್ದು ಬೀಗ ಹಾಕಲಾಗಿದೆ. ಉಳಿದ ನಾಲ್ಕು ಕೊಠಡಿಯಲ್ಲಿ 1 ಶಾಲಾ ಮುಖ್ಯಶಿಕ್ಷಕ, ಸಿಬ್ಬಂದಿಗೆ ಮೀಸಲಿಟ್ಟಿದ್ದು ಇನ್ನುಳಿದ 3 ಕೊಠಡಿಗಳಲ್ಲೇ 1ರಿಂದ 6ತರಗತಿ ನಡೆಸಲಾಗುತ್ತದೆ. 5 ಮತ್ತು 6ನೇ ತರಗತಿ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ನಡೆಸಲು ತೊಂದರೆಯಾದಾಗ ಕೆಲವೊಮ್ಮೆ 5 ಅಥವಾ 6ನೇ ತರಗತಿ ಮಕ್ಕಳಿಗೆ ಕೊಠಡಿ ಹೊರಗಡೆ ಕಟ್ಟೆಯ ಮೇಲೆ ಪಾಠ ಹೇಳಲಾಗುತ್ತದೆ. ಇಂತಹ ಸಮಸ್ಯೆ ತಾಲೂಕಿನ ಹಲವು ಕಡೆಗಳಲ್ಲಿ ಕಂಡುಬರುತ್ತದೆ. ಹೆಚ್ಚುವರಿ ಕೊಠಡಿ ಅವಶ್ಯವಿರುವಲ್ಲಿ ಕೊಠಡಿಗಳ ವ್ಯವಸ್ಥೆ ಕಲ್ಪಿಸುವುದು ಅಗತ್ಯವಿದೆ.
ತಾಲೂಕಿನ 116 ಸರ್ಕಾರಿ ಶಾಲೆಗಳ ಪೈಕಿ ಒಟ್ಟು 50 ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಸಮರ್ಪಕವಾಗಿ ಶೌಚಗೃಹಗಳಿಲ್ಲದ ಕಾರಣ ಮಕ್ಕಳಿಗೆ ತೊಂದರೆಯಾಗಿದೆ. ಈ 50 ಶಾಲೆಗಳ ಪೈಕಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 463 ಶೌಚಗೃಹಗಳ ಅವಶ್ಯವಿದ್ದು, ಸದ್ಯ 130 ಶೌಚಗೃಹಗಳು ಇವೆ. ಈಗಿರುವ ಶೌಚಗೃಹಗಳು ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿವೆ. ಕೆಲ ಕಡೆ ಅವುಗಳೂ ದುರಸ್ತಿ ಸ್ಥಿತಿಯಲ್ಲಿವೆ. ಸಮರ್ಪಕ ಶೌಚಗೃಹ ನಿರ್ವಿುಸಿದರೆ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ.
ಮಳೆಯಿಂದ ಹಾನಿಯಾಗಿರುವ ಶಾಲಾ ಕೊಠಡಿಗಳ ತುರ್ತು ದುರಸ್ತಿಗೆ ವರದಿ ಸಲ್ಲಿಸಲಾಗಿದೆ. ಶಿಥಿಲಗೊಂಡಿರುವ ಕೊಠಡಿಯೊಳಗೆ ಮಕ್ಕಳನ್ನು ಕೂರಿಸದಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಎನ್ಆರ್ಇಜಿ ಅನುದಾನದಲ್ಲಿ ಶೌಚಗೃಹ, ಕಾಂಪೌಂಡ್, ಆಟದ ಮೈದಾನ ಸಮತಟ್ಟು ಮಾಡುವ ಕುರಿತಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತರಲಾಗಿದೆ. ಶಾಲಾ ಮುಖ್ಯ ಶಿಕ್ಷಕರಿಂದ ಗ್ರಾ.ಪಂ. ವರೆಗೆ ಪತ್ರ ಬರೆಯಲಾಗುತ್ತದೆ. ಶಾಲಾ ಕೊಠಡಿಗಳ ದುರಸ್ತಿ, ಶೌಚಗೃಹ ನಿರ್ವಿುಸುವ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು. | ಎಂ.ಎಫ್. ರ್ಬಾ, ಬಿಇಒ ಮುಂಡರಗಿ