ಜಿಲ್ಲೆ

ವಿದೇಶಿ ವಿಶ್ವವಿದ್ಯಾಲಯಗಳ ಆಗಮನದಿಂದ ಉನ್ನತ ಶಿಕ್ಷಣ ಅಭಿವೃದ್ಧಿಗೆ ಪೂರಕ

ಮೈಸೂರು: ದೇಶದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಸ್ಥಾಪನೆ ಮತ್ತು ಕಾರ್ಯಾಚರಣೆಯಿಂದ ಉನ್ನತ ಶಿಕ್ಷಣ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದು ಪಂಜಾಬ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎಸ್.ಚಾವಲ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ, ಮೈಸೂರು ವಿವಿ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಭಾರತದಲ್ಲಿ ಉನ್ನತ ಶಿಕ್ಷಣದ ಭವಿಷ್ಯ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಈ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಈಗಾಗಲೇ ಕರಡು ನಿಯಮ ಬಿಡುಗಡೆ ಮಾಡಿದ್ದು, ಇದರ ಸಾಧಕ-ಬಾಧಕಗಳ ಕುರಿತು ಚರ್ಚೆ, ಸಂವಾದಗಳು ನಡೆಯುತ್ತಿವೆ. ಕೆಲವೊಂದು ಗೊಂದಲ, ಆತಂಕಗಳೂ ಇವೆ. ಆದರೆ, ಈ ಕ್ರಮ ಉನ್ನತ ಶಿಕ್ಷಣ ಬೆಳವಣಿಗೆಗೆ ಪೂರಕವಾಗಿದೆ. ಹೊಸ ಅವಕಾಶಗಳು ತೆರೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

ಜಾಗತಿಕ ಮಟ್ಟದಲ್ಲಿ 100 ರ‌್ಯಾಂಕ್‌ನ ಒಳಗಿರುವ ವಿದೇಶಿ ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಬಹುದು. ಇದಕ್ಕೆ ಯುಜಿಸಿ 10 ವರ್ಷ ಅವಧಿಗೆ ಅನುಮೋದನೆ ನೀಡಲಿದೆ. ಬಳಿಕ ಮೌಲ್ಯಮಾಪನ ಮಾಡಿ ಮಾನ್ಯತೆ ನವೀಕರಿಸಲು ಅವಕಾಶವಿದೆ. ಈ ವಿಶ್ವವಿದ್ಯಾಲಯಗಳು ತಮ್ಮ ಪ್ರವೇಶ ಪ್ರಕ್ರಿಯೆ, ಶುಲ್ಕ ರಚನೆಯನ್ನು ತಾವೇ ನಿರ್ಧರಿಸುವ ಅಧಿಕಾರ ಹೊಂದಿರುತ್ತವೆ. ತನ್ನ ನಿಧಿಯನ್ನು ಮಾತೃದೇಶಕ್ಕೆ ತೆಗೆದುಕೊಂಡು ಹೋಗುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸುವ ವಿದೇಶಿ ವಿಶ್ವವಿದ್ಯಾಲಯಗಳು ಪೂರ್ಣಾವಧಿಯ ಕೋರ್ಸ್‌ಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ಮಾತ್ರವೇ ಒದಗಿಸಬೇಕು. ಆನ್‌ಲೈನ್ ಅಥವಾ ದೂರ ಶಿಕ್ಷಣ ಮಾದರಿಯಲ್ಲಿ ಕೋರ್ಸ್ ನಡೆಸುವಂತಿಲ್ಲ ಎಂದರು.
ಈ ಕ್ರಮದ ಉದ್ದೇಶವೇ ವಿದೇಶಕ್ಕೆ ಶಿಕ್ಷಣ ವೆಚ್ಚದ ವರ್ಗಾವಣೆ, ಪ್ರತಿಭಾ ಪಲಾಯನ ತಡೆಗಟ್ಟುವುದಾಗಿದೆ. 2016ರಿಂದ 2021ರವರೆಗೆ 26.44 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಕಲಿಕೆಗೆ ಹೋಗಿದ್ದಾರೆ. ಇದಕ್ಕಾಗಿ 2015ರಲ್ಲಿ 3.6 ಬಿಲಿಯನ್ ಖರ್ಚಾಗಿದೆ ಎಂದು ಹೇಳಿದರು.

2020ರಲ್ಲಿ 4.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶಿ ಶಿಕ್ಷಣಕ್ಕಾಗಿ 13.5 ಬಿಲಿಯನ್ ರೂ. ವ್ಯಯಿಸಿದ್ದಾರೆ. ಈ ಪ್ರಮಾಣ ಪ್ರಸಕ್ತ ವರ್ಷದಲ್ಲಿ 24 ಬಿಲಿಯನ್ ರೂ. (2 ಲಕ್ಷ ಕೋಟಿ ರೂ.) ವಿದೇಶಕ್ಕೆ ಹರಿದು ಹೋಗಿದೆ. ಭಾರತ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿರುವ ಹಣಕ್ಕಿಂತ ಇದು 5 ಪಟ್ಟು ಹೆಚ್ಚಾಗಿದೆ ಎಂದರು.

ವಿದೇಶಿ ವಿವಿಗಳ ಆಗಮನದಿಂದ ಉನ್ನತ ಶಿಕ್ಷಣದಲ್ಲಿ ಹೊಸ ಅವಕಾಶಗಳ ಸೃಷ್ಟಿ, ಉದ್ಯೋಗಾವಕಾಶಗಳ ವೃದ್ಧಿ, ಶಿಕ್ಷಣ ಗುಣಮಟ್ಟ ಸುಧಾರಣೆ, ಹೊಸ ಕೋರ್ಸ್‌ಗಳ ಅಭಿವೃದ್ಧಿಗೆ ಭಾರತೀಯ ವಿಶ್ವವಿದ್ಯಾಲಯಗಳಿಗೆ ಉತ್ತೇಜನ, ವಿವಿಗಳ ನಡುವೆ ಸ್ಪರ್ಧೆಯನ್ನು ಹೆಚ್ಚಿಸಲಿದೆ. ಭಾರತೀಯ ಅಧ್ಯಯನ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ದೊರೆಯಲಿದೆ. ಅಲ್ಲದೆ, ಸಾಂಸ್ಕೃತಿಕ ವಿನಿಮಯಕ್ಕೂ ಉತ್ತೇಜನ, ಉನ್ನತ ಶಿಕ್ಷಣದ ಜಾಗತೀಕರಣಕ್ಕೆ ವೇದಿಕೆ, ಬ್ರಾೃಂಡ್ ಬಿಲ್ಡಿಂಗ್ ಅನುಕೂಲವಾಗಿದೆ. ಇದೆಲ್ಲವೂ ಪೂರಕ ಅಂಶಗಳಾಗಿವೆ ಎಂದರು.

ಪೂರಕ ಅಂಶಗಳೊಂದಿಗೆ ಕೆಲ ದುಷ್ಪರಿಣಾಮಗಳೂ ಉಂಟಾಗಲಿವೆ. ಶಿಕ್ಷಣ ವೆಚ್ಚದಲ್ಲಿ ಏರಿಕೆ, ಪ್ರತಿಭೆಗಳ ಕಳ್ಳತನಕ್ಕೆ ದಾರಿ, ವಿದೇಶಿ ವಿವಿ ಕ್ಯಾಂಪಸ್‌ನಲ್ಲಿ ಮೀಸಲಾತಿ ಜಾರಿ ಇಲ್ಲದಿರುವುದು ಸಾಮಾಜಿಕವಾಗಿ ಕಂದಕ ಸೃಷ್ಟಿಸಲಿದೆ. ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ನಿಲುಕದ ನಕ್ಷತ್ರವಾಗಲಿದೆ. ಮತ್ತಷ್ಟು ಅಸಮಾನತೆ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಎಚ್. ರಾಜಶೇಖರ್, ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್.ಎನ್. ಹೆಗ್ಡೆ, ಪ್ರೊ.ಕೆ.ಎಸ್. ರಂಗಪ್ಪ, ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಕಾರ್ಯದರ್ಶಿ ಪ್ರೊ.ಸುರೇಶ್ ಎಸ್.ಹೊನ್ನಪ್ಪ, ಮೈವಿವಿ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಇದ್ದರು.