ಜಿಲ್ಲೆ

ವಿದೇಶದಲ್ಲಿ ಹಣ್ಣಿನ ರಾಜನ ಹಿರಿಮೆ


50ಕ್ಕೂ ಹೆಚ್ಚು ಅಂಗಡಿಗಳು, ಸುಮಾರು 25 ಮಾರಾಟಗಾರರು, ಎರಡು ವಾರದ ಸಂತೆ ಎಂದೇ ಹೇಳಬಹುದು. ಪ್ರತಿದಿನಕ್ಕೆ ಸಾವಿರಾರು ಜನರು ಬಂದು ಆನಂದಿಸಿ, ಸ್ವಾದಿಸಿ, ಹೋಗುತ್ತಿರುವರು. ಇದೇ ಕತಾರಿನ ದೋಹದಲ್ಲಿರುವ ಸೂಕ್ ವಾಕಿಫ್ ನಲ್ಲಿ ನಡೆದ ಮಾವಿನ ಮೇಳ.
ರಾಜಪುರಿ, ತೂತಪುರಿ, ಬಾದಾಮಿ, ನಾಟಿ, ಸಿಂಧೂರ ಇನ್ನೂ ಅನೇಕ ತಳಿಗಳ ಮಾವಿನ ಹಣ್ಣುಗಳ ಸುವಾಸನೆ ತುಂಬಿದ ಈ ಒಳಾಂಗಣ ಪ್ರದೇಶದಲ್ಲಿ, ಮಾವಿನ ಹಣ್ಣಿನ ರಸ, ಮಾವಿನಕಾಯಿ ಜೊತೆಗೆ ಉಪ್ಪು ಖಾರ, ಮಾವಿನ ಉಪ್ಪಿನಕಾಯಿ, ಮಾವಿನ ಐಸ್ ಕ್ರೀಮ್, ಮಾವಿನ ಫಲೂದ, ಮಾವಿನ ಲಸ್ಸಿ ಹೀಗೆ ವೈವಿಧ್ಯಮಯ ರುಚಿಕರ ರಸಭರಿತ ಮಾವಿನ ತಿಂಡಿ ಮತ್ತು ಪಾನಿಯಗಳು ಎಲ್ಲರ ಇಂದ್ರಿಯಗಳನ್ನು ಆಕರ್ಷಿಸಿತು.
ಒಂದೆಡೆ ಸುಪ್ರಸಿದ್ಧ ವಾಣಿಜ್ಯ ಮಳಿಗೆಗಳ ಸಾಲಾಗಿ ಇದ್ದರೆ ಇನ್ನೊಂದೆಡೆ ಪ್ರಸಿದ್ಧ ಉಪಹಾರ ಕೇಂದ್ರಗಳ ಅಂಗಡಿ ಮುಂಗಟ್ಟುಗಳು ಇದ್ದವು, ಮತ್ತೊಂದೆಡೆ ನೇರ ಮಾರಾಟಗಾರರ (ಹೋಲ್ಸೇಲ್) ಮಳಿಗೆಗಳು ಇದ್ದವು. ಭಾರತ , ಕತಾರ್ , ಶ್ರೀಲಂಕಾ , ಬಾಂಗ್ಲಾದೇಶ, ಫಿಲಿಪಿನ್ಸ್ ಇನ್ನೂ ಹಲವು ದೇಶದ ಜನರು ಬಂದು ಈ ಮಾವಿನ ಮೇಳದಲ್ಲಿ ಹಣ್ಣಿನ ಯಾವುದಾದರೂ ಒಂದು ರುಚಿಯನ್ನು ಸೇವಿಸಿ ಹೋಗಿರುವರು.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಮಧ್ಯಪ್ರದೇಶ, ಗೋವಾ ಇನ್ನಿತರ ರಾಜ್ಯಗಳಿಂದ ಆಮದು ತರಿಸಿದ ಮಾವಿನ ಹಣ್ಣುಗಳು. ಕತರಿನ ಭಾರತೀಯ ದೂತಾವಾಸದ ನೇತೃತ್ವದಲ್ಲಿ ಐಬಿಪಿಸಿ (ಭಾರತೀಯ ವ್ಯವಹಾರ ಹಾಗೂ ವೃತ್ತಿ ನಿರತ ಮಂಡಳಿಯ) ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ವಾರಗಳ ಮಾವಿನ ಮೇಳವು, ಸಂಪನ್ನಗೊಂಡಿತು.