ಜಿಲ್ಲೆ

ವಿದೇಶಕ್ಕೆ 42 ಲಕ್ಷ ಕೋಟಿ ಕೃಷಿ ಉತ್ಪನ್ನಗಳ ರಫ್ತು

ಚಿತ್ರದುರ್ಗ: ಕೃಷಿ ಪ್ರಧಾನವಾದ ಭಾರತದಿಂದ ವಿದೇಶಗಳಿಗೆ ವಾರ್ಷಿಕ 42 ಲಕ್ಷ ಕೋಟಿ ಎಲ್ಲ ಬಗೆಯ ಕೃಷಿ ಉತ್ಪನ್ನಗಳು, 7.01 ಲಕ್ಷ ಕೋಟಿ ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತಾಗುತ್ತಿವೆ ಎಂದು ಎಂಎಲ್ಸಿ ಕೆ.ಎಸ್. ನವೀನ್ ತಿಳಿಸಿದರು.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ ನಿಯಮಿತ, ಜಿಪಂ, ಜಿಲ್ಲಾಡಳಿತ, ಕೃಷಿ ಇಲಾಖೆಯಿಂದ ಜಿಪಂ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಯೋಜನೆ ಮೌಲ್ಯ ಸರಪಳಿ ಗುಚ್ಚ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಉತ್ಪನ್ನ ಬ್ರಾೃಂಡಿಂಗ್ ಮೂಲಕ ಮೌಲ್ಯ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ, ಪ್ಯಾಕೇಜ್ ಬಹಳ ಮುಖ್ಯ ಪಾತ್ರವಹಿಸಲಿದೆ. ವಸ್ತುವಿನ ಗುಣಮಟ್ಟದ ವಿಚಾರದಲ್ಲಿ ಯಾವ ಕಾರಣಕ್ಕೂ ರಾಜಿ ಆಗಬಾರದು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೆ ಕ್ರಮವಹಿಸಬೇಕು. ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ, ಗ್ರಾಹಕರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಉದ್ದಿಮೆಯಲ್ಲಿ ವ್ಯವಹಾರಿಕ ಹಾಗೂ ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಬೇಕು. ಆಹಾರ ಸಂಸ್ಕರಣಾ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ಹೆಸರಾಗಬೇಕು. ಆರ್ಥಿಕವಾಗಿ ಎಲ್ಲರೂ ಸದೃಢರಾಗಬೇಕು. ಆರೋಗ್ಯಕರ ಆಹಾರ ಪದಾರ್ಥ ಜನಸಾಮಾನ್ಯರೆಲ್ಲ ಉಪಯೋಗಿಸುವ ವಾತಾವರಣ ಸೃಷ್ಟಿಸಬೇಕು ಎಂದರು.

ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ ವಿಶೇಷ ಸೌಲಭ್ಯ ಕಲ್ಪಿಸುವ ಜತೆಗೆ ತರಬೇತಿ, ಹಣಕಾಸಿನ ವ್ಯವಸ್ಥೆ, ಸಹಾಯಧನ ನೀಡುವ ಮೂಲಕ ಗೃಹಣಿಯಾಗಿದ್ದವರನ್ನೂ ಉದ್ಯಮಿಯನ್ನಾಗಿ ಮಾಡುವ ಮಹತ್ತರ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು.

ನವೆಂಬರ್‌ನಲ್ಲಿ ಬೃಹತ್ ಸ್ವದೇಶಿ ಮೇಳ: ಕೇಂದ್ರ ಸರ್ಕಾರ ಎಂಎಸ್‌ಎಂಇ ಸಹಭಾಗಿತ್ವದಲ್ಲಿ ಸ್ವದೇಶಿ ವಸ್ತುಗಳ ಕುರಿತು ಅರಿವು ಮೂಡಿಸಲು ಚಿತ್ರದುರ್ಗದಲ್ಲಿ ನವೆಂಬರ್ 12ರಿಂದ 16ರವರೆಗೆ 5 ದಿನ ಬೃಹತ್ ಸ್ವದೇಶಿ ಮೇಳ ಆಯೋಜಿಸಲಾಗುವುದು. ಮೇಳದಲ್ಲಿ 200ಕ್ಕೂ ಹೆಚ್ಚು ಮಳಿಗೆ ಸ್ಥಾಪನೆಯಾಗಲಿವೆ ಎಂದರು.

ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ಸಂಪ್ರಾದಾಯಿಕ ಕಿರುಉದ್ದಿಮೆಗಳನ್ನು ಮುನ್ನೆಲೆಗೆ ತರಬೇಕೆಂಬ ಉದ್ದೇಶದಿಂದ ಆತ್ಮನಿರ್ಭರ ಯೋಜನೆಯ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಯಿತು. ಇದರಡಿ 10 ಲಕ್ಷ ರೂ. ಸಹಾಯಧನ ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯಮದಲ್ಲಿ ತೊಡಗುವ ಮಹಿಳೆಯರಿಗೆ ಬಲತುಂಬುವ ಉದ್ದೇಶವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ವಿನಿಯೋಗ ಮಾಡಿದೆ. ರಾಜ್ಯ ಸರ್ಕಾರ ಕೂಡ ಶೇ. 50ರಷ್ಟು ರಿಯಾಯಿತಿ ದರದಲ್ಲಿ 18 ಲಕ್ಷ ರೂ. ಸಹಾಯಧನ ನೀಡಿ, ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 6700ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 132 ಫಲಾನುಭವಿಗಳಿದ್ದು, 2.41 ಕೋಟಿ ರೂ. ಕೇಂದ್ರ ಸರ್ಕಾರದ ಹಾಗೂ 3.56 ಕೋಟಿ ರೂ. ರಾಜ್ಯ ಸರ್ಕಾರ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು.

ಯೋಜನೆಯ ವಸ್ತು ಪ್ರದರ್ಶನ ಮಳಿಗೆಯನ್ನು ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ಉದ್ಘಾಟಿಸಿದರು. ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್. ಮಹೇಶ್ವರಪ್ಪ, ಉಪಾಧ್ಯಕ್ಷ ಧರಣೇಶ್, ತಾಲೂಕು ಕೃಷಿಕ ಸಮಾಜದ ಶಿವಮೂರ್ತಪ್ಪ, ಮಹಾದೇವಯ್ಯ, ಚಳ್ಳಕೆರೆ ಉಪ ಕೃಷಿ ನಿರ್ದೇಶಕ ಡಿ. ಉಮೇಶ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಪ್ರತಿನಿಧಿ ಚಂದ್ರಕುಮಾರ್, ನಬಾರ್ಡ್ ಪ್ರತಿನಿಧಿ ವಿನಂತ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ. ರಾಘವೇಂದ ಇತರರಿದ್ದರು.