ಚನ್ನರಾಯಪಟ್ಟಣ: ಇಂಡೋನೇಷ್ಯಾದ ಬಾಲಿಯಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಚನ್ನರಾಯಪಟ್ಟಣದ ಭರತನಾಟ್ಯ ಕಲಾವಿದೆ ವಿದುಷಿ ಪಿ.ಶುಭ್ರತಾ ಅವರ ಕಲಾ ತಂಡದ ಸಾಧನೆಯನ್ನು ಪರಿಗಣಿಸಿ ಅವರಿಗ ‘ಕಲಾತಿಲಕ’ ಬಿರುದು ನೀಡಿ ಸನ್ಮಾನಿಸಲಾಯಿತು.
ಇಂಡೋನೇಷಿಯಾದ ಬಾಲಿಯಲ್ಲಿ 2025ನೇ ಸಾಲಿನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ದೇಶಗಳಿಂದ ಸುಮಾರು 6 ಕಲಾ ತಂಡಗಳು ಭಾಗವಹಿಸಿದ್ದವು. ಭಾರತ ದೇಶದಿಂದ ಕರ್ನಾಟಕ ರಾಜ್ಯದ ಪರವಾಗಿ ಚನ್ನರಾಯಪಟ್ಟಣದ ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ. ಶುಭ್ರತಾ ಅವರ ಕಲಾ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನೃತ್ಯ ರೂಪಕವನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಹಿನ್ನೆಲೆಯಲ್ಲಿ ಇಂಡೋನೇಷಿಯಾ ಸರ್ಕಾರದಿಂದ ‘ಕಲಾ ತಿಲಕ ’ ಬಿರುದು ನೀಡಿ ನೆನಪಿನ ಕಾಣಿಕೆ ಕೊಡುವ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಭರತನಾಟ್ಯ ಕಲಾವಿದೆ ಪಿ. ಶುಭ್ರತಾ, ದೇಶದ ಅತ್ಯುನ್ನತ ಕಲೆಯಾದ ಭರತನಾಟ್ಯವನ್ನು ಇಡೀ ವಿಶ್ವವೇ ಪೂಜ್ಯ ಭಾವನೆಯಲ್ಲಿ ಕಾಣುತ್ತಿದೆ. ಇಂಡೋನೇಷ್ಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಭರತನಾಟ್ಯ ಕಲೆಯನ್ನು ಮೆಚ್ಚಿ ಇಲ್ಲಿನ ಆಡಳಿತ ವ್ಯವಸ್ಥೆ ತುಂಬು ಹೃದಯದಿಂದ ಅಭಿನಂದಿಸಿ ನಮ್ಮನ್ನು ಸನ್ಮಾನಿಸಿದ್ದಾರೆ. ಅವರ ಅಭಿನಂದನೆಗೆ ನಾವು ಆಭಾರಿಯಾಗಿದ್ದೇವೆ ಎಂದರು.
ಇಂಡೋನೇಷ್ಯಾದ ದೇಶದ ಬಾಲಿಯ ಸೆನೆಟರ್ ಡಾ. ಈ. ಗುಸ್ತಿ ಆರ್ಯುವೇದ ಕರ್ಣ, ಮಹೇಂದ್ರ ದತ್ತ ರಾಜ ಹಾಗೂ ಕಾರ್ಯಕ್ರಮದ ರೂವಾರಿಗಳಾದ ದೀಪಾ ರಾವ್, ಮಾಧವ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ವಿದುಷಿ ರೇವತಿ ಕಾಮಂತ್, ಭರತನಾಟ್ಯ ಕಲಾವಿದರಾದ ಸುಶ್ಮಿತಾ ಹಾಗೂ ಬಿಂದುಶ್ರೀ ಉಪಸ್ಥಿತರಿದ್ದರು.