ಚಿಕ್ಕಬಳ್ಳಾಪುರ : ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸುರಕ್ಷತಾ ಕ್ರಮಗಳ ವಿಡಿಯೋವನ್ನು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತೋರಿಸುವ ಮೂಲಕ ಭಯ ಹೋಗಲಾಡಿಸುವಂತೆ ಜಿಪಂ ಸಿಇಒ ಬಿ.ೌಜಿಯಾ ತರನ್ನುಮ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಆತಂಕದ ವಾತಾವರಣದ ನಡುವೆ ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸಬೇಕು. ಪರೀಕೆ ಬರೆಯಲು ಅವಶ್ಯಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿ, ಮಕ್ಕಳಿಗೆ ತೋರಿಸುವ ಮೂಲಕ ಧೈರ್ಯ ತುಂಬಬೇಕು. ಪರೀಕ್ಷೆ ವೇಳೆ ನಿಯಮಗಳು ಪಾಲನೆಯಾಗುತ್ತಿವುದನ್ನು ದೃಢಪಡಿಸಿಕೊಳ್ಳುವಂತೆ ತಾಕೀತು ಮಾಡಿದರು.
ಮಕ್ಕಳು ಪರೀಕ್ಷಾ ಪ್ರವೇಶ ಪತ್ರ ಪಡೆಯವು ವೇಳೆ, ಪರೀಕ್ಷೆ ಹಾಗೂ ನಂತರ ಅವಧಿಯಲ್ಲಿ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು. ಪರೀಕ್ಷೆ ವೇಳೆಯಲ್ಲಿ ಶಾಲೆಗಳಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೊಳ್ಳದಂತೆ ಸೂಚಿಸಿದರು.ಉತ್ತಮ ಅಂಕಗಳಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಶುಭಾಶಯ ಕೋರುವ, ಪೂರ್ವಸಿದ್ಧತೆಯ ಬಗೆಗಿನ ಕ್ರಮಗಳ ಕುರಿತ ಪತ್ರಗಳನ್ನು ಕಳುಹಿಸಬೇಕು ಹುರಿದುಂಬಿಸುವಂತೆ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ 90 ಸರ್ಕಾರಿ ಬಸ್ ಮತ್ತು 110 ಖಾಸಗಿ ಬಸ್ ಸೇರಿ 210 ಬಸ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪ ವಿಭಾಗೀಯ ಅಧಿಕಾರಿ ಬಸವರಾಜು ಮಾಹಿತಿ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಮತ್ತಿತರರು ಇದ್ದರು.
ಚಿಗುರು ಚಿಂತನೆ ಸ್ಪರ್ಧೆ : ಪರಿಸರ ದಿನದ ಅಂಗವಾಗಿ ಮಕ್ಕಳಿಗಾಗಿ ‘ಚಿಗುರು ಚಿಂತನೆ’ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಲು ಸಿಇಒ ಫೌಜೀಯಾ ತರನ್ನುಮ್ ಸೂಚಿಸಿದರು. ಪ್ರತಿ ಶಾಲೆಯಲ್ಲಿಯೂ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಸ್ವಚ್ಛ ಮತ್ತು ಹಸಿರು ಚಿಕ್ಕಬಳ್ಳಾಪುರದ ಬಗ್ಗೆ ಹೊಸ ಕಲ್ಪನೆಯ ವೀಡಿಯೋ ಚಿತ್ರೀಕರಣ ಮಾಡಿಸಬೇಕು. ಇದರಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ ಬಹುಮಾನ 3 ಸಾವಿರ ರೂ., ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಗುವುದು ಎಂದರು.
ವಿವಿಧ ಯೋಜನೆಗಳ ಚರ್ಚೆ: ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಪರಿಶೀಲನಾ ಸಭೆ ಸಿಇಒ ಬಿ.ಫೌಜೀಯಾ ತರನ್ನುಮ್ ನೇತೃತ್ವದಲ್ಲಿ ನಡೆಯಿತು. ಪ್ರಧಾನಮಂತ್ರಿ ಮಾತೃ ವಂದನಾ, ಮಾತೃ ಭೋಜನ, ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣೆ ಹಾಗೂ ಕಟ್ಟಡ ನಿರ್ಮಾದ ಕುರಿತ ಚರ್ಚಿಸಲಾಯಿತು. ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ, ಶಾಲೆಗಳು, ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಸಸಿಗಳನ್ನು ನೆಡುವುದು, ಇದರಲ್ಲಿ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದ ಸೊಪ್ಪು ತರಕಾರಿಗಳ ಕೈತೋಟ ಬೆಳೆಸಲು ಆದ್ಯತೆ ನೀಡುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಮತ್ತಿತರರು ಇದ್ದರು.