ಜಿಲ್ಲೆ

ವಿಟಿಯು ಆನ್‌ಲೈನ್ ಪದವಿ ಆರಂಭ: ಕುಲಪತಿ ಡಾ.ಡಿ.ವಿದ್ಯಾಶಂಕರ್ ಮಾಹಿತಿ

ಮೈಸೂರು: ಉನ್ನತ ಶಿಕ್ಷಣ ಕಲಿಯಲು ಆಸಕ್ತಿ ಇರುವವರಿಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಸಕ್ತ ವರ್ಷದಿಂದಲೇ ಆನ್‌ಲೈನ್ ಪದವಿ ಆರಂಭಿಸಿದೆ ಎಂದು ಕುಲಪತಿ ಡಾ.ಡಿ.ವಿದ್ಯಾಶಂಕರ್ ತಿಳಿಸಿದರು.
ಈ ಆನ್‌ಲೈನ್ ಪದವಿಯನ್ನು ನೀಡಲು ಎಐಸಿಟಿಇ ಅನುಮೋದನೆ ಹಾಗೂ ಯುಜಿಸಿ ಅರ್ಹತೆಯನ್ನು ಪಡೆದುಕೊಂಡಿರುವ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ನಮ್ಮದಾಗಿದೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಗತ್ಯ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಂತೆಯೇ ಆನ್‌ಲೈನ್ ಪದವಿಗೆ ದಾಖಲಾಗಬಹುದು. ಪಠ್ಯಕ್ರಮ, ಬೋಧನೆ, ವಿಚಾರ ವಿನಿಮಯ ಅಲ್ಲದೆ, ಆನ್‌ಲೈನ್‌ನಲ್ಲಿಯೇ ಪರೀಕ್ಷೆ ನಡೆಸಲಾಗುವುದು. ಮಾನ್ಯತೆ ಪಡೆದುಕೊಂಡಿರುವ ಪದವಿಗೆ ಸೆ. 2ರಿಂದಲೇ ದಾಖಲು ಆಗಬಹುದಾಗಿದ್ದು, ಸೆ. 30 ಕೊನೇ ದಿನಾಂಕವಾಗಿದೆ ಎಂದು ಹೇಳಿದರು.
ಆರು ಸೆಮಿಸ್ಟರ್‌ಗಳ ಯುಜಿ ಪದವಿಯಲ್ಲಿ ಬಿಬಿಎ (ಡಿಜಿಟಲ್ ಮಾರ್ಕೆಟಿಂಗ್), ಬಿಸಿಎ (ಡಾಟಾ ಸೈನ್ಸ್), ಬಿಸಿಎ (ಡಾಟಾ ಅನಾಲಿಟಿಕ್ಸ್), ನಾಲ್ಕು ಸೆಮಿಸ್ಟರ್‌ಗಳ ಸ್ನಾತಕೋತ್ತರ ಶಿಕ್ಷಣದಲ್ಲಿ ಎಂಬಿಎ (ಡಿಜಿಟಿಲ್ ಮಾರ್ಕೆಟಿಂಗ್), ಎಂಬಿಎ (ಎಚ್‌ಆರ್, ಎಂಎಂ, ಎಫ್‌ಎಂ), ಎಂಬಿಎ (ಬಿಜಿನೆಸ್ ಅನಾಲಿಟಿಕ್ಸ್), ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್, ಎಂಸಿಎ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್), ಎಂಸಿಎ (ಸೈಬರ್ ಸೆಕ್ಯೂರಿಟಿ ಆ್ಯಂಡ್ ಕ್ಲೌಡ್ ಕಂಪ್ಯೂಟಿಂಗ್) ಇರಲಿವೆ ಎಂದರು.
ನಾಲ್ಕು ಸೆಮಿಸ್ಟರ್‌ಗಳ ಪಿಜಿ ಡಿಪ್ಲೊಮಾ (ಫೈನಾನ್ಶಿಯಲ್ ಅನಾಲಿಟಿಕ್ಸ್, ಮಾರ್ಕೆಟಿಂಗ್ ಅನಾಲಿಟಿಕ್ಸ್, ಎಚ್.ಆರ್ ಅನಾಲಿಟಿಕ್ಸ್), ಪಿಜಿ ಡಿಪ್ಲೊಮಾ (ಇನ್ವೆಸ್ಟ್‌ಮೆಂಟ್ ಮ್ಯಾನೇಜ್ಮೆಂಟ್, ರಿಸ್ಕ್ ಮ್ಯಾನೇಜ್ಮೆಂಟ್, ಪೈನಾನ್ಶಿಯಲ್ ಮ್ಯಾನೇಜ್ಮೆಂಟ್, ರಿಟೇಲ್ ಮ್ಯಾನೇಜ್ಮೆಂಟ್), ಪಿಜಿ ಡಿಪ್ಲೊಮಾ (ಎಐ ಆ್ಯಂಡ್ ಡಾಟಾ ಸೈನ್ಸ್), ಪಿಜಿ ಡಿಪ್ಲೊಮಾ (ಸೈಬರ್ ಸೆಕ್ಯೂರಿಟಿ ಆ್ಯಂಡ್ ಕ್ಲೌಡ್ ಕಂಪ್ಯೂಟಿಂಗ್), ಪಿಜಿ ಡಿಪ್ಲೊಮಾ (ಬಿಗ್ ಡಾಟಾ ಅನಾಲಿಟಿಕ್ಸ್), ಪಿಜಿ ಡಿಪ್ಲೊಮಾ (ಸಾಫ್ಟ್‌ವೇರ್ ಟೆಸ್ಟಿಂಗ್) ಕೋರ್ಸ್‌ಗಳನ್ನು ಈ ವರ್ಷ ಪರಿಚಯಿಸಲಾಗಿದೆ ಎಂದು ವಿವರಿಸಿದರು.

ಅಂದಾಜು 80 ಸಾವಿರ ರೂ.ನಲ್ಲಿ ಪದವಿ
ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡುತ್ತಿರುವವರು ಹಾಗೂ ಸಾಂಪ್ರದಾಯಿಕವಾಗಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಏಕಕಾಲದಲ್ಲಿ ದ್ವಿಪದವಿ ಪಡೆಯಲು ಈ ಆನ್‌ಲೈನ್ ಕೋರ್ಸ್‌ಗಳು ನೆರವಾಗುತ್ತವೆ. ಎಲ್ಲರಿಗೂ ಶಿಕ್ಷಣ ಎಲ್ಲೆಡೆ ದೊರೆಯಬೇಕು ಎನ್ನುವ ಉದ್ದೇಶದಿಂದ ಅತ್ಯಂತ ಕಡಿಮೆ ಶುಲ್ಕ ನಿಗದಿಪಡಿಸಲಾಗಿದ್ದು, ಅಂದಾಜು 80 ಸಾವಿರ ರೂ.ಗಳ ವೆಚ್ಚದಲ್ಲಿ ಪದವಿ ಪಡೆದುಕೊಳ್ಳಲು ಅವಕಾಶವಿದೆ ಎಂದರು.
ಕರ್ನಾಟಕ ಮಾತ್ರವಲ್ಲದೆ, ದೇಶ, ವಿದೇಶಗಳಲ್ಲಿ ಎಲ್ಲೇ ಇದ್ದರೂ ನಮ್ಮ ವಿಶ್ವವಿದ್ಯಾಲಯದ ಆನ್‌ಲೈನ್ ತರಗತಿಯನ್ನು ಪಡೆದುಕೊಳ್ಳಲು ಅವಕಾಶವಿದೆ. ಇವರಿಗೆ ಸಹಾಯ ಮಾಡಲು ಹೆಲ್ಪ್‌ಡೆಸ್ಕ್ ಸಹ ಆರಂಭಿಸಲಾಗಿದ್ದು, ನಮ್ಮ ವಿವಿಯ ಅಧಿಕೃತ ವೆಬ್‌ಸೈಟ್ ಠಿಠಿ://ಟ್ಞ್ಝಜ್ಞಿಛಿಛಿಜ್ಟಛಿಛಿ.ಠ್ಠಿ.ಚ್ಚ.ಜ್ಞಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಬೆಳ್ಳಿಹಬ್ಬ ಪೂರೈಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯದಾದ್ಯಂತ 212 ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳ ಸಮೂಹವನ್ನು ನೋಡಿಕೊಳ್ಳುತ್ತಿದೆ. ವಿವಿಯು 25 ಸ್ವಾಯತ್ತ ಶಿಕ್ಷಣ ಸಂಸ್ಥೆಗಳು, 17 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 26 ಆರ್ಕಿಟೆಕ್ಚರ್ ಶಿಕ್ಷಣ ಸಂಸ್ಥೆಗಳು ಹಾಗೂ ಹೆಚ್ಚುವರಿಯಾಗಿ ವಿಟಿಯು ಒಂದು ಕಾನ್ಸ್ಟಿಟ್ಯುಯೆಂಟ್ ಕಾಲೇಜನ್ನು ಒಳಗೊಂಡಿದೆ. ವಿವಿ ಅಡಿಯಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, 42 ಪದವಿ ಮತ್ತು 94 ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಟಿ.ಪಿ.ರೇಣುಕಮೂರ್ತಿ, ಉಪ ನಿರ್ದೇಶಕಿ ಡಾ.ಪಿ.ಸಂಧ್ಯಾ, ಸಹಾಯಕ ನಿರ್ದೇಶಕ ಡಾ.ಪಿ.ಕೆ.ಕುಮಾರ್, ವಿಶೇಷ ಅಧಿಕಾರಿ ಪಿ.ಪ್ರಕೃತಿ ಇತರರು ಇದ್ದರು.