ಮೈಸೂರು: ಪ್ರಸ್ತುತ ಹವಾಮಾನದ ವೈಪರೀತ್ಯದಿಂದ ಹಲವು ಬೆಳೆಗಳಲ್ಲಿ ಅನೇಕ ರೋಗಗಳು ಮತ್ತು ಕೀಟಗಳು ಬರುತ್ತಿವೆ. ಆದ್ದರಿಂದ ರೈತರು ವಿಜ್ಞ್ಞಾನಿಗಳಿಂದ ವೈಜ್ಞಾನಿಕ ಸಲಹೆ ಪಡೆದು ಕೃಷಿ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್ ತಿಳಿಸಿದರು.
ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಬೇಸಾಯ ಕ್ರಮ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವಿಧ ಬೆಳೆಗಳಿಗೆ ವೈಜ್ಞಾನಿಕ ಮಾಹಿತಿಯನ್ನು ಕೆವಿಕೆಗೆ ಬಂದು ಅಥವಾ ದೂರವಾಣಿ ಮುಖಾಂತರ ಸಲಹೆ ಸೂಚನೆ ಪಡೆದುಕೊಳ್ಳುವುದು ಸೂಕ್ತ ಎಂದರು.
ಬಾಳೆ ಬೆಳೆಯು ಮೈಸೂರಿನ ಭೌಗೋಳಿಕ ಬೆಳೆಯಾಗಿದ್ದು, ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಈ ತರಬೇತಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಾ. ಮಹದೇವಯ್ಯ ಮಾತನಾಡಿ, ರೈತರು ವಿಜ್ಞಾನಿಗಳ ಸಲಹೆ ಮೇರಿಗೆ ಕೃಷಿ ಮಾಡಿ, ಉತ್ತಮ ಇಳುವರಿಯ ಬಾಳೆ ಬೆಳೆೆಯಿರಿ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಷಯ ತಜ್ಞ ಡಾ.ಜಿ.ಎಂ.ವಿನಯ್ ಮಾತನಾಡಿ, ಬಾಳೆ ಬೆಳೆಯಲ್ಲಿ ಭೂಮಿ ಸಿದ್ಧತೆ, ತಳಿಗಳ ಆಯ್ಕೆ, ನಂಜನಗೂಡು ರಸಬಾಳೆಯ ಪ್ರಾಮುಖ್ಯತೆ, ಕಂದುಗಳ ಆಯ್ಕೆ, ಜೈವಿಕ ಗೊಬ್ಬರಗಳ ಬಳಕೆ, ಟಿಶ್ಯೂ ಬಾಳೆಯ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕಳೆ ನಿರ್ವಹಣೆ, ಬಾಳೆ ಸಮೃದ್ಧಿ ಬಳಕೆ, ಸಸ್ಯ ಪ್ರಚೋದಕಗಳ ಬಳಕೆ ಹಾಗೂ ಬಾಳೆ ಬೆಳೆಯಲ್ಲಿ ಅಧಿಕ ಇಳುವರಿಯನ್ನು ಪಡೆಯುವ ಸುಲಭ ಮಾರ್ಗಗಳನ್ನು ರೈತರಿಗೆ ತಿಳಿಸಿದರು.
ಸಸ್ಯಸಂರಕ್ಷಣೆ ವಿಷಯ ತಜ್ಞ ಡಾ. ವೈ.ಪಿ.ಪ್ರಸಾದ್ ಮಾತನಾಡಿ, ಬಾಳೆ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಸೊರಗು ರೋಗ, ಎಲೆಚುಕ್ಕೆ ರೋಗ, ಬಂಚಿ ಟಾಪ್ ರೋಗಗಳ ಲಕ್ಷಣಗಳು, ಅವುಗಳ ಗುರುತಿಸುವಿಕೆ ಹಾಗೂ ಸಮಗ್ರ ರೋಗ ನಿರ್ವಹಣೆ ಜತೆಗೆ ಬಾಳೆಯಲ್ಲಿ ಹೆಚ್ಚಾಗಿ ಕಾಣುವ ಕಾಂಡ ಹಾಗೂ ಗಡ್ಡೆ ಕೊರೆಯುವ ಹುಳು, ಜಂತು ಹುಳು, ಎಲೆ ತಿನ್ನುವ ರಸ ಹೀರುವ ಕೀಟಗಳ ಲಕ್ಷಣಗಳ, ಗುರುತಿಸುವಿಕೆ ಹಾಗೂ ಸಮಗ್ರ ನಿರ್ವಹಣೆ ಕುರಿತು ಹಾಗೂ ಜೈವಿಕ ಕೀಟನಾಶಕ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಬಾಳೆಯಲ್ಲಿ ಮೌಲ್ಯವರ್ಧನೆ ಕುರಿತು ಮಾತನಾಡಿದ ಗೃಹವಿಜ್ಞಾನ ವಿಷಯ ತಜ್ಞ ಡಾ.ದೀಪಕ್ ಅವರು, ಬಾಳೆ ಹಣ್ಣನ್ನು ಉಪಯೋಗಿಸಿಕೊಂಡು ಬಾಳೆ ಹುಡಿ ಹಾಗೂ ಅದರ ಇತರ ಉತ್ಪನ್ನಗಳ ಕುರಿತು, ಬಾಳೆ ಚಿಪ್ಸ್, ಬಾಳೆ ಜಾಮ್, ಬಾಳೆ ಹಣ್ಣಿನಿಂದ ತಯಾರು ಮಾಡಬಹುದಾದ ಇತರ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ರೈತರು ಪ್ರಸ್ತುತ ಬಾಳೆಯಲ್ಲಿ ಬರುತ್ತಿರುವ ತೊಂದರೆಗಳ ಬಗೆ ವಿವರಿಸಿ ವಿಜ್ಞಾನಿಗಳಿಂದ ಸಲಹೆ ಪಡೆದರು.
ಪ್ರಗತಿಪರ ಬಾಳೆ ರೈತರು ತಮ್ಮ ಬಾಳೆ ಬೆಳೆಯ ಅನುಭವಗಳನ್ನು ಇತರ ರೈತರೊಂದಿಗೆ ಹಂಚಿಕೊಂಡರು. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಂದ ಸುಮಾರು 120ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.