ಜಿಲ್ಲೆ

ವಿಜ್ಞಾನಿಗಳ ಶಿಫಾರಸ್ಸಿನಂತೆ ನೀರು-ಗೊಬ್ಬರ ಬಳಸಿ

ಕುರುಗೋಡು: ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಮತ್ತು ರಸಗೊಬ್ಬರ ಬಳಸುತ್ತಿರುವುದರಿಂದ ಭೂಮಿಯಲ್ಲಿ ನಿಸರ್ಗದತ್ತವಾಗಿ ಜೈವಿಕ ಕ್ರಿಯೆ ನಡೆಯದೆ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಪ್ರಾಧ್ಯಾಪಕ ಬಿ.ವೈ.ಬಂಡಿವಡ್ಡರ್ ಹೇಳಿದರು.

ಪಟ್ಟಣದ ರೈತಸಮುದಾಯ ಭವನದಲ್ಲಿ ಧಾರವಾಡದ ಜನ ಮತ್ತು ನೆಲ ನಿರ್ವಹಣೆಸಂಸ್ಥೆ (ವಾಲ್ಮಿ) ವತಿಯಿಂದ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಂಘದ ಸದಸ್ಯರು ಮತ್ತು ರೈತರಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಕೃಷಿ ಚಟುವಟಿಕೆಗೆ ಬೇಕಾಗುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಲಭ್ಯವಿದೆ. ಆದರೆ, ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡದ ಪರಿಣಾಮ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಕೃಷಿ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಕೃಷಿ ವಿಜ್ಞಾನಿಗಳು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ನೀರು, ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಕೆ ಮಾಡಿ ಗುಣಮಟ್ಟದ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಇಂದುಧರ ಹಿರೇಮಠ ಮಾತನಾಡಿ, ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳು ಕಾಲಕಾಲಕ್ಕೆ ಸಭೆ ನಡೆಸಿ ನೀರಾವರಿ ನಿಗಮದಿಂದ ಸಂಘಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣ ಕುರಿತು ಚರ್ಚಿಸಿ ಎಲ್ಲ ರೈತರಿಗೆ ನೀರು ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ನಿಯಮದ ಪ್ರಕಾರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ ರೈತರು ಹೊರತುಪಡಿಸಿ ಬೇರೆಯವರು ಅನಧಿಕೃತವಾಗಿ ಕಾಲುವೆ ನೀರು ಬಳಕೆ ಮಾಡಿದರೆ ನೀರು ಬಳಕೆದಾರರ ಸಂಘದವರು ಪೊಲೀಸ್ ಠಾಣೆಗೆ ದೂರು ನೀಡಿ ಕೊನೆಯ ಭಾಗದ ರೈತರಿಗೆ ನ್ಯಾಯ ದೊರೆಕಿಸಿಕೊಡಬೇಕು ಎಂದು ತಿಳಿಸಿದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎಸ್.ರವಿ ಮಾತನಾಡಿ, ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯಿಂದ ಭೂಮಿಯಲ್ಲಿ ನೈಸರ್ಗಿವಾಗಿ ದೊರೆಯುವ ಲಘು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಪರಿಣಾಮ ಇಳುವರಿ ಕುಂಠಿತವಾಗುತ್ತದೆ. ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ ಸೂಕ್ತವಾದ ಬೆಳೆಯನ್ನು ಬೆಳೆಯಬೇಕು. ಭೂ ಫಲವತ್ತತೆ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರದ ಜತೆಗೆ ಜೈವಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಹಗರಿ ಕೃಷಿವಿಜ್ಞಾನ ಕೇಂದ್ರದ ಬೇಸಾಯ ತಜ್ಞರಾದ ಮಲ್ಲೇಶ, ಪಾಲಯ್ಯ ನೀರು ನಿರ್ವಹಣೆ ಮಹಾಮಂಡಳಿ ನಿರ್ದೇಶಕ ಎಚ್.ಶಾಂತನಗೌಡ, ವಾಲ್ಮಿ ಸಂಸ್ಥೆಯ ಫಕಿರೇಶ್ ಅಂಗಡಿ, ನೀರಾವರಿ ಇಲಾಖೆ ಎಇಇ ರಾಮರೆಡ್ಡಿ, ವೀರೇಶ್ ಇದ್ದರು.