ವಿಜಯಪುರ: ವಿಜ್ಞಾನ ಎನ್ನುವುದು ತುಂಬಾ ವಿಸ್ಮಯವಾದ ಜಗತ್ತು. ವಿಜ್ಞಾನಿಯಾದವರಿಗೆ ಸಮಯ ಪ್ರಜ್ಞೆ, ತಾಳ್ಮೆ, ಹಾಗೂ ವಿಭಿನ್ನವಾದ ವೈಜ್ಞಾನಿಕ ಕೌಶಲ್ಯ ಕರಗತವಾಗಿರುವುದು ಬಹುಮುಖ್ಯ ಎಂದು ಇಸ್ರೋದ ನಿವೃತ್ತ ವಿಜ್ಞಾನಿಯಾದ ಎಂ.ಎಸ್. ಶ್ರೀನಿವಾಸನ್ ಹೇಳಿದರು.
ಅವರು ನಗರದ ಅಥಣಿ ರಸ್ತೆಯ ಕೆ.ಎಸ್.ಅರ್.ಟಿ.ಸಿ. ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ ಇಸ್ರೋ ವಿಜ್ಞಾನಿಗಳ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ವೈಜ್ಞಾನಿಕವಾಗಿ ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ಭಾರತದಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಹಾಗೂ ಈ ನೆಲದ ಮಣ್ಣಿನಲ್ಲಿ ಅದ್ಭುತ ಶಕ್ತಿಯಿದೆ. ವಿಜ್ಞಾನಿಯಾಗಬಯಸುವ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ವಿಚಾರಗಳನ್ನು ಶಿಕ್ಷಕರಿಂದ ಕೇಳಿ ತಿಳಿಯಬೇಕು ಹಾಗೂ ಪ್ರಯೋಗಶೀಲತೆ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ತಮ್ಮ ಅನುಭವದ ಬುತ್ತಿಯನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಾ, ಹಲವಾರು ಉತ್ತಮ ವಿಚಾರಗಳನ್ನು ಹಂಚಿಕೊಂಡರು.
ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಇಸ್ರೋಗೆ ಹೇಗೆ ಪ್ರವೇಶ ಪಡಿಯಬೇಕು? ಇಸ್ರೋದ ವಿಜ್ಞಾನಗಳು ಯಾವ ರೀತಿ ತಯಾರಿ ನಡೆಸುತ್ತಾರೆ? ಚಂದ್ರಯಾನ-2 ರ ವಿಫಲಕ್ಕೆ ಕಾರಣಗಳೇನು? ಕಡಿಮೆ ಖರ್ಚಿನಲ್ಲಿ ಇಂತಹ ಅದ್ಭುತ ಕಾರ್ಯ ಹೇಗೆ ಸಾಕಾರಗೊಂಡಿತು? ತಾವು ವಿಜ್ಞಾನಿಯಾಗಲು ತಮಗೆ ಸ್ಫೂರ್ತಿ ದೊರೆತದ್ದು ಹೇಗೆ? ವಿಜ್ಞಾನಿಯಾಗಬಯಸುವ ವಿದ್ಯಾರ್ಥಿಗಳಿಗೆ ತಮ್ಮ ಸಲಹೆ ಏನು? ಇಂತಹ ಅನೇಕ ಸ್ವಾರಸ್ಯ ಮತ್ತು ನಿಗೂಢವಾದ ಪ್ರಶ್ನೆಗಳಿಗೆ ಸಹಜ ಹಾಗೂ ಸರಳವಾಗಿ ಅರ್ಥವಾಗುವ ಹಾಗೆ ಮಾರ್ಮಿಕವಾಗಿ ಉತ್ತರಿಸಿದರು.
ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು, ವಿದ್ಯಾರ್ಥಿಗಳಾದ ತಾವು ಕೂಡ ಈ ಪುಟ್ಟ ಸಸಿಯು ಹೆಮ್ಮರವಾಗಿ ಬೆಳೆಯುವಂತೆ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆಗೈದು ಗಗನದ ಎತ್ತರಕ್ಕೆ ಬೆಳೆಯಬೇಕು ಎಂದು ವಿಜ್ಞಾನಿ ಎಂ.ಎಸ್. ಶ್ರೀನಿವಾಸನ್ ಹೇಳಿದರು.
ಮಂಟೂರಿನ ಸರಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಡಾ. ಶಶಿಧರ ಕುಂಬಾರ ಮಾತನಾಡಿ, ಚಂದ್ರಯಾನ-3 ರ ಉಡಾವಣೆಯ ಯಶ್ವಸ್ಸಿನ ಹಿಂದೆ ಇಸ್ರೋದ ವಿಜ್ಞಾನಿಗಳ ಅವಿರತ ಪ್ರರಿಶ್ರಮವಿದೆ. ಆದರಿಂದ ಜಗತ್ತೇ ಇಂದು ಭಾರತದತ್ತ ಗಮನಹರಿಸಿದೆ. ಅಂತಹ ಹೆಮ್ಮೆಯ ವಿಜ್ಞಾನಿಗಳನ್ನು ಆಹ್ವಾನಿಸಿ, ಸನ್ಮಾನಿಸಿ ಅವರ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಎಕ್ಸಲಂಟ್ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಹುಟ್ಟಿದ್ದು ಪ್ರಶ್ನೆಗಳಿಂದ. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು. ಇಂತಹ ವಿಜ್ಞಾನ ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ಚಂದ್ರಯಾನ-3 ರ ಉಡಾವಣೆಯ ಯಶಸ್ಸು ಭಾರತೀಯರಾದ ನಮಗೆ ತುಂಬಾ ಹೆಮ್ಮೆ ತರುವ ಸಂಗತಿ. ಇಂತಹ ಅದ್ಭುತವಾದ ಸೇವೆಯಲ್ಲಿ ಭಾಗಿಯಾದ ವಿಜ್ಞಾನಿಗಳನ್ನು ಸನ್ಮಾನಿಸಿ, ಗೌರವಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂದರು.
ವಿದ್ಯಾರ್ಥಿನಿ ಬಿ. ಆಕಾಂಕ್ಷ ಪ್ರಾರ್ಥಿಸಿದಳು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶ್ರದ್ಧಾ ಜಾಧವ ನಿರೂಪಿಸಿದರು. ಎಕ್ಸಲಂಟ್ ಕಾಲೇಜು ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ವಂದಿಸಿದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.