ಚಾಮರಾಜನಗರ: ಕಾಂತೀಯ ತೇಲುವಿಕೆ ನಿಯಮವನ್ನು ಬಳಸಿಕೊಂಡು ಬುಲೆಟ್ ಟ್ರೈನ್ ಹೇಗೆ ವೇಗವಾಗಿ ಚಳಿಸುತ್ತದೆ, ದಿನ ನಿತ್ಯದಲ್ಲಿ ಗಣಿತದ ಬಳಕೆ, ಸಸ್ಯ ಮತ್ತು ಜೀವಶಾಸ ಹಾಗೂ ಭೌತವಿಜ್ಞಾನದ ಕೌತುಕಗಳನ್ನು ಮಕ್ಕಳು ವಿವರಣೆ ನೀಡುತ್ತದ್ದರೇ, ವಿವಿಧ ಶಾಲೆಗಳಿಂದ ಬಂದಿದ್ದ ಮಕ್ಕಳು ಆಶ್ಚರ್ಯ ಚಕಿತರರಾಗಿ ನೋಡುತ್ತಿದ್ದರು.
ನಗರದ ದೀನಬಂಧು ಶಿಕ್ಷಕ ಸಂಪನ್ಮೂಲ ಕೇಂದ್ರ ಹಾಗೂ ದೀನಬಂಧು ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿಜ್ಞಾನ ಮೇಳ-2025 ಕಾರ್ಯಕ್ರಮದಲ್ಲಿ ಮಕ್ಕಳ ಸೃಜನಶೀಲ ಕಲಿಕೆಗೆ ಸಹಕಾರಿಯಾಗುವ ಕ್ಷಣಗಳು ಅನಾವರಣಗೊಂಡಿತು.
ಮೇಳದಲ್ಲಿ 6ನೇ ತರಗತಿ ವಿದ್ಯಾರ್ಥಿ ತೇಜಸ್ ಅವರು ಕಾಂತೀಯ ತೇಲುವಿಕೆ ಪ್ರಯೋಗದಲ್ಲಿ ಆಯಸ್ಕಾಂತದ ಆಕರ್ಷಣೆ ಮತ್ತು ವಿಕರ್ಷಣೆ ಬಲದಿಂದ ಬುಲೆಟ್ ಟ್ರೈನ್ ಆವಿಸ್ಕಾರವನ್ನು ವಿವರಿಸಿದರು. ಅದಲ್ಲದೇ ಕಾಂತತ್ವ ವಿಭಾಗದಲ್ಲಿ ಅಯಸ್ಕಾಂತದ ಫಜಲ್, ವಿವಿಧ ರೀತಿಯ ಅಯಸ್ಕಾಂತಗಳಲ್ಲಿ ಕಾಂತೀಯ ರೇಖೆಗಳ ವಿನ್ಯಾಸ, ಕಾಂತೀಯ ಮತ್ತು ಅಕಾಂತೀಯ ವಸ್ತುಗಳು, ತೇಲುವ ಅಯಸ್ಕಾಂತ ಹಾಗೂ ಸ್ವತಂತ್ರವಾಗಿ ತೂಗುಬಿಟ್ಟ ಕಾಂತದ ಪ್ರಯೋಗವನ್ನು ಅನಾವರಣಗೊಳಿಸಿದರು.
ಗಾಳಿ ಮತ್ತು ನೀರು ವಿಭಾಗದಲ್ಲಿ ಗಾಳಿ ಸ್ಥಳದ ಆಕ್ರಮಣ, ಗಾಳಿಯ ಸಂಪೀಡನೆ, ನೀರನ್ನು ಬಾಟಲಿನಿಂದ ವೇಗವಾಗಿ ಖಾಲಿ ಮಾಡುವುದು ಹೇಗೆ, ನೀರಿನ ಒತ್ತಡ, ಜಲಾಂತರ್ಗಾಮಿ, ಬರ್ನೌಲಿ ತತ್ವದ ಪ್ರಯೋಗಗಳನ್ನು ವಿವರಿಸಿದರು. ಸಸ್ಯ ಮತ್ತು ಜೀವಶಾಸ್ತ್ರ ವಿಭಾಗದಲ್ಲಿ ಪ್ರಥಮ ಮೂಲ ಮತ್ತು ಕಾಂಡದ ಉಗಮ, ಬೇರು ಮತ್ತು ಕಾಂಡಗಳ ತುಲನಾತ್ಮಕ ಅಧ್ಯಯನ, ಗುರುತ್ವ ಪ್ರತಿಕ್ರಿಯೆ, ಸೂಕ್ಷ್ಮಾಣು ಜೀವಿಗಳ ವೀಕ್ಷಣೆ, ಮಾನವನ ಶ್ವಾಸಕೋಶ ಮಾದರಿಯನ್ನು ಪ್ರದರ್ಶಿಸಿದರು.
ಬೆಳಕು ವಿಭಾಗದಲ್ಲಿ ಬೆಳಕು ಮತ್ತು ಕನ್ನಡಿಯೊಂದಿಗೆ ಆಟ, ಗುಣಿತ ಪ್ರತಿಫಲನ, ವಕ್ರೀಭವನ ಮತ್ತು ಸಂಪೂರ್ಣ ಆಂತರಿಕ ಪ್ರತಿಫಲನ, ದೃಷ್ಟಿ ಭ್ರಮೆ, ಪ್ರತಿಫಲನದ ನಿಯಮಗಳು, ಬೆಳಕಿನ ಪೆಟ್ಟಿಗೆಯ ಪ್ರಯೋಗಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ಶಾಖ ವಿಭಾಗದಲ್ಲಿ ಬಿಸಿ ಗಾಳಿ ಮೇಲೆರುವಿಕೆ, ಶಾಖದಿಂದ ಘನ ವಸ್ತುಗಳ ವ್ಯಾಕೋಚನೆ, ಉಷ್ಣ ವಹನ ಮತ್ತು ಸಂವಹನ, ಅನಿಲ ವಸ್ತುವಿನ ವ್ಯಾಕೋಚನೆ, 3 ಮೇಣದ ಬತ್ತಿ ಪ್ರಯೋಗದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ರಾಮಕೃಷ್ಣ ಭಟ್, ದೀನಬಂಧು ಸಂಸ್ಥೆಯ ಸಹ ಕಾರ್ಯದರ್ಶಿ ಚೇತನ್ ದೇವಾಡಿಗ, ಪ್ರಕಾಶ್ ಇತರರು ಉಪಸ್ಥಿತರಿದ್ದರು.
ಗಣಿತ ಮಾರುಕಟ್ಟೆಯಲ್ಲಿ ಗಿಜಿಗಿಜಿ:
ವಿಜ್ಞಾನ ಮೇಳದಲ್ಲಿ ಆಯೋಜಿಸಿದ್ದ ಗಣಿತ ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳೇ ವಸ್ತುಗಳನ್ನು ತಂದು ಮಾರಾಟ ಮಾಡುವುದು ಹಾಗೂ ಕೊಂಡುಕೊಳ್ಳುತ್ತಿದ್ದರಿಂದ ಮಕ್ಕಳು ಗಿಜಿಗುಟ್ಟಿದರು. ದಿನ ನಿತ್ಯದಲ್ಲಿ ಗಣಿತ, ಜನ ಜೀವನದಲ್ಲಿ ಗಣಿತ ಎಂಬ ಮತ್ತೆರಡು ವಿಭಾಗದಲ್ಲಿ ಉದ್ದ, ಎತ್ತರ, ಕಾಲ, ಕ್ಯಾಲೆಂಡರ್ ಇತಿಹಾಸ, ಸುತ್ತಳತೆ ವಿಸ್ತೀರ್ಣ, ಜಮೀನಿನ ವಿಸ್ತೀರ್ಣವನ್ನು ತಿಳಿಸುವ ಮೂಲಕ ಅನುಭವದ ಕಲಿಕೆಯ ಮಹತ್ವ ತಿಳಿಸಿದರು. ಭೌತ ವಿಜ್ಞಾನ ವಿಭಾಗದಲ್ಲಿ ಬಲಗೈ ಹೆಬ್ಬೆರಳು ನಿಯಮ, ಸೊಲೆನಾಯ್ಡ್, ಫ್ಲೆಮಿಂಗ್ ಎಡಗೈ ನಿಯಮ, ಬಲಗೈ ನಿಯಮ, ಬದಲಾಗುತ್ತಿರುವ ಕಾಂತಕ್ಷೇತ್ರದಿಂದ ವಿದ್ಯುತ್ ಉತ್ಪಾದನೆ, ಪ್ರೊಜೆಕ್ಟೈಲ್ ಚಲನೆ, ದೂರದ ಸೂತ್ರ, ನ್ಯೂಟನ್ ಚಲನೆಯ 3 ನಿಯಮಗಳು, ಪ್ಲವನತೆ, ಕೋನಿಯ ಸಂವೇಗ ಸಂರಕ್ಷಣಾ ನಿಯಮವನ್ನು ವಿದ್ಯಾರ್ಥಿಗಳು ಪ್ರಯೋಗದ ಮೂಲಕ ತಿಳಿಸಿದರು. ಕಣ್ಣು ವಿಭಾಗದಲ್ಲಿ ಸಮೀಪ ದೃಷ್ಟಿ, ದೂರ ದೃಷ್ಟಿ ದೋಷ, ಕಣ್ಣಂಚಿನ ದೃಷ್ಟಿ, ಕಣ್ಣಿನ ಪಾಪೆ ಮಾದರಿ, ಕಣ್ಣಿನ ಅಂಧ ಪ್ರದೇಶ ಮಾದರಿ, ಆಳ ಮತ್ತು ದೂರ ಗ್ರಹಿಕೆಯ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಾಯೋಗಿಕ ವಿಜ್ಞಾನ ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳಲ್ಲಿ ಕಣ್ಮರೆಯಾಗಿದೆ. ಇದನ್ನು ಕಲಿಸಲು ದೊಡ್ಡ ಪ್ರಯೋಗಾಲಯ ಬೇಕು ಎಂಬ ಭ್ರಮೆ ಇದೆ. ಸಾಧಾರಣವಾಗಿ ಸಿಗುವ ರಬ್ಬರ್ ಬ್ಯಾಂಡ್, ಪ್ಲಾಸ್ಟಿಕ್ ಬಾಟಲ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಮಕ್ಕಳಿಗೆ ಪ್ರಯೋಗಾತ್ಮಕವಾಗಿ ವಿಜ್ಞಾನವನ್ನು ಕಲಿಸಬಹುದು. ಇಂತಹ ವಾತಾವರಣವನ್ನು ದೀನ ಬಂಧು ಕಲ್ಪಿಸಿಕೊಟ್ಟಿದೆ.
-ಜಿ.ಎಸ್.ಜಯದೇವ್, ಸಂಸ್ಥಾಪಕ ಕಾರ್ಯದರ್ಶಿ, ದೀನಬಂಧು, ಚಾಮರಾಜನಗರ