ಜಿಲ್ಲೆ

ವಿಜ್ಞಾನದ ವಿಷಯದಲ್ಲಿ ಹೆಚ್ಚಿನ ಆಸಕ್ತಿವಹಿಸಿ, ಪ್ರಾಂಶುಪಾಲ ಎಂ.ಬಿ. ಮಹದೇವಯ್ಯ ಸಲಹೆ

ನೆಲಮಂಗಲ: ವಿದ್ಯಾರ್ಥಿಗಳು ವಿಜ್ಞಾನದ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಿ ಯುವವಿಜ್ಞಾನಿಗಳಾಗಿ ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದು ವಿದ್ಯಾಚೇತನ ಟೆಕ್ನೋ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಬಿ. ಮಹದೇವಯ್ಯ ಅಭಿಪ್ರಾಯಪಟ್ಟರು.

ನಗರದ ಸುಭಾಷ್‌ನಗರ ಬಳಿಯ ವಿದ್ಯಾಚೇತನ ಟೆಕ್ನೋ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವವಿಜ್ಞಾನಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿರುವ ಪ್ರತಿಭೆ ಬೆಳಗುವ ನಿಟ್ಟಿನಲ್ಲಿ ಸಾಮರ್ಥ್ಯ ವೃದ್ಧಿ, ಹೆಚ್ಚೆಚ್ಚು ಕಲಿಕೆ, ಜ್ಞಾನ ಗಳಿಕೆಗೆ ಪ್ರೋತ್ಸಾಹ ತುಂಬಾ ಮುಖ್ಯ. ಯುವ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಗಮನ ನೀಡಿ ಜಿಲ್ಲಾ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದಾಗ ವಿಜ್ಞಾನಿಗಳ ಜತೆ ಸಂವಾದ ನಡೆಸಿ, ತಮ್ಮ ನೈಜ ಪ್ರತಿಭೆಯನ್ನು ತೋರಿಸಬೇಕು ಎಂದರು.

ನಿಜವಾದ ವಿಜ್ಞಾನ ವಿದ್ಯಾರ್ಥಿಗಳು ಪ್ರಶ್ನಿಸದೆ ಏನನ್ನು ಸುಲಭವಾಗಿ ಒಪ್ಪಿಕೊಳ್ಳಲಾರರು. ಪ್ರಶ್ನಿಸುವ ಸಾಮರ್ಥ್ಯವನ್ನು ಎಲ್ಲ ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಗುಣವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ತು ಗ್ರಾಮಾಂತರ ಜಿಲ್ಲಾ ಸಂಯೋಜಕ ಸಿದ್ಧರಾಜು ಮಾತನಾಡಿ, ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಸ್ಪರ್ಧೆಯಲ್ಲಿ ಜಿಲ್ಲೆಯ 4 ತಾಲೂಕುಗಳ 8 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ಪರ್ಧೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾಚೇತನ ಟೆಕ್ನೋ ಪದವಿಪೂರ್ವ ಕಾಲೇಜಿನ ಹಲೀಂ ಸಾದಿಯಾ ಪ್ರಥಮ ಬಹುಮಾನವಾಗಿ 5 ಸಾವಿರ ರೂ. ನಗದು ಪಡೆದರೆ, ದಾಬಸ್‌ಪೇಟೆಯ ಜ್ಞಾನ ಸಂಗಮ ಪದವಿಪೂರ್ವ ಕಾಲೇಜಿನ ನಿಖಿ ನಾಗರಾಜು ದ್ವಿತೀಯ ಬಹುಮಾನವಾಗಿ 3 ಸಾವಿರ ರೂ. ನಗದು ಪಡೆದುಕೊಂಡರು. ಸ್ಪರ್ಧೆಯಲ್ಲಿದ್ದ ಇತರ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.

ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಕಚೇರಿ ಅಧೀಕ್ಷಕ ಜಗದೀಶ್, ದ್ವಿತೀಯ ದರ್ಜೆ ಸಹಾಯಕ ಗುರುದತ್, ಹೊಯ್ಸಳ ಪ್ರಥಮದರ್ಜೆ ಕಾಲೇಜು ಪ್ರಾಧ್ಯಪಾಕ ಶ್ರೀನಿವಾಸ್, ಜ್ಞಾನಧಾಮ ಪದವಿ ಕಾಲೇಜು ಪ್ರಾಂಶುಪಾಲ ವೆಂಕಟೇಶ್, ವಿದ್ಯಾಚೇತನ ಟೆಕ್ನೋ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎಂ. ಹೊನ್ನಲಿಂಗಪ್ಪ, ಜಯಶಂಕರ್, ಮುರುಳಿಗಿರಿಗೌಡ, ಜಯಶ್ರೀ, ರೇಣುಕಮ್ಮ, ರುದ್ರದೇವರು ಮತ್ತಿತರರು ಇದ್ದರು.