ಜಿಲ್ಲೆ

ವಿಜ್ಞಾನದ ಆವಿಷ್ಕಾರಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿ

ಪಾಂಡವಪುರ: ಮಕ್ಕಳಲ್ಲಿರುವ ಕ್ರಿಯಾಶೀಲತೆ ಮತ್ತು ಪ್ರತಿಭೆಗಳನ್ನು ಹೊರತರಲು ಶಿಕ್ಷಕರು, ಪಾಲಕರು ಮುಂದಾಗಬೇಕು ಎಂದು ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಭೌತ ವಿಜ್ಞಾನಿ ಸಿ.ವಿ.ರಾಮನ್ ವಿಜ್ಞಾನಕ್ಕೆ ಮಹತ್ವದ ಕೊಡುಗೆ ನೀಡುವ ಜತೆಗೆ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶಕರಾಗಿ ನಿಲ್ಲಬೇಕು. ಮಕ್ಕಳಿಗೆ ಇಂತಹ ವಿಚಾರದಲ್ಲಿ ಪ್ರೋತ್ಸಾಹ ನೀಡಿದರೆ ಮುಂದೆ ಆ ಮಕ್ಕಳು ದೇಶದ ಆಸ್ತಿಯಾಗಿ ರೂಪುಗೊಳ್ಳಲಿದ್ದಾರೆ. ಶಾಲೆ ಹಾಗೂ ಮನೆಗಳಲ್ಲಿ ಮಕ್ಕಳಿಗೆ ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ವಿದ್ಯಾರ್ಥಿಗಳು ವಿವಿಧ ಬಗೆಯ ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು. ಮುಖ್ಯಶಿಕ್ಷಕ ರಘು, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಎಸ್.ರಾಜು, ಕುಮಾರಸ್ವಾಮಿ, ನಾಗಸುಂದರ್, ಚನ್ನಮಾದೇಗೌಡ, ವಿಶ್ವನಾಥ್, ರವಿಕುಮಾರ್, ಶಿಕ್ಷಕರು, ಸಿಬ್ಬಂದಿ ಇದ್ದರು.