ಜಿಲ್ಲೆ

ವಿಜ್ಞಾನ ವಿಭಾಗ ಆರಂಭಕ್ಕೆ ಅನುಮತಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ 2023-24ರ ಶೈಕ್ಷಣಿಕ ವರ್ಷದಿಂದ ನೂತನ ವಿಜ್ಞಾನ ವಿಭಾಗಕ್ಕೆ ಇಲಾಖೆ ಜಂಟಿ ನಿರ್ದೇಶಕರು ಅನುಮೋದನೆ ನೀಡಿದ್ದಾರೆ ಎಂದು ಕೆ.ಇ. ಬೋರ್ಡ್ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯವು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಎ ಶ್ರೇಣಿ ಮಾನ್ಯತೆ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಗಣಕವಿಜ್ಞಾನ ಸಂಯೋಜನೆಗಳು ಲಭ್ಯವಿವೆ. ಈ ವರ್ಷ ಎಸ್ಸೆಸ್ಸೆಲ್ಸಿ ಪ್ರತಿಭಾವಂತ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ಶೇ.25ರಷ್ಟು ವಿನಾಯತಿ ನೀಡಲಾಗುವುದು ಎಂದರು.
ಕಾಲೇಜು ಸುಸಜ್ಜಿತ ಪ್ರಯೋಗಾಲಯಗಳು, ಹಿರಿಯ ಹಾಗೂ ನುರಿತ ಉಪನ್ಯಾಸಕರಿಂದ ನೀಟ್, ಜೆಇಇ ಹಾಗೂ ಕೆ-ಸಿಇಟಿ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಇ-ಗ್ರಂಥಾಲಯ, ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ, ವಿಶೇಷ ಉಪನ್ಯಾಸ ಮಾಲಿಕೆ, ಆಯ್ದ ಕ್ರೀಡೆಗಳಿಗೆ ವಿಶೇಷ ತರಬೇತಿ, ಇತರ ಸೌಲಭ್ಯಗಳಿವೆ ಎಂದರು.
ಕಾಲೇಜಿನಲ್ಲಿ ಕಲಾ, ಶಿಕ್ಷಣ ಹಾಗೂ ವಾಣಿಜ್ಯ ವಿಭಾಗಗಳಿವೆ. ಪ್ರವೇಶ ಪಡೆಯುವ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದರೂ 2 ವರ್ಷಗಳ ಅಧ್ಯಯನ ಅವಧಿಯಲ್ಲಿ ಉತ್ತಮ ಅಂಕ, ಸಂಸ್ಕಾರ ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ಸಜ್ಜುಗೊಳಿಸುವಲ್ಲಿ ಕಾಲೇಜು ತನ್ನದೇ ಆದ ಹೆಸರು ಮತ್ತು ಮನ್ನಣೆ ಪಡೆದಿದೆ ಎಂದರು.
ಡಿ. ಎಸ್. ರಾಜಪುರೋಹಿತ, ಎಸ್.ಎನ್.ಪರಾಂಡೆ, ಡಾ. ಎಸ್. ಎಚ್. ಹನಮಂತಗಡ, ಡಾ.ಕೆ. ಎನ್. ಕುಲಕರ್ಣಿ, ಆರ್.ಎ. ಸಿದ್ದಾಂತಿ, ವಸಂತ ಮುರ್ಡೇಶ್ವರ, ಗುರುರಾಜ ಜಮಖಂಡಿ, ಇತರರು ಇದ್ದರು.