ಬೀರೂರಿನ ಅಕ್ಕಮಹಾದೇವಿ ಪ್ರೌಢಶಾಲೆಯಲ್ಲಿ ಬೀರೂರು ಶೈಕ್ಷಣಿಕ ವಲಯದ ಪ್ರೌಢಶಾಲಾ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಶಿಕ್ಷಣಾಧಿಕಾರಿ ಚೋಪ್ದಾರ್ ಉದ್ಘಾಟಿಸಿದರು. ಶೇಖರಪ್ಪ, ಶಿವಕುಮಾರ್, ಸಂಪತ್‌ಕುಮಾರ್ ಇತರರಿದ್ದರು.  
ಜಿಲ್ಲೆ

ವಿಜ್ಞಾನ, ತಂತ್ರಜ್ಞಾನದಿಂದ ಮಾತ್ರ ಅಭಿವೃದ್ಧಿ

ಬೀರೂರು: ದೇಶದ ಅಭಿವೃದ್ಧಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾತ್ರ ಸಾಧ್ಯ. ಇದನ್ನು ಸಾಧಿಸಲು ಮಕ್ಕಳಿಗೆ ಪ್ರೌಢಶಾಲಾ ಹಂತದಲ್ಲಿಯೇ ವೈಜ್ಞಾನಿಕ ಅರಿವು ಮೂಡಿಸುವುದು ಅಗತ್ಯ ಎಂದು ಶಿಕ್ಷಣಾಧಿಕಾರಿ ಚೋಪ್ದಾರ್ ತಿಳಿಸಿದರು.

ಅಕ್ಕಮಹಾದೇವಿ ಪ್ರೌಢಶಾಲೆಯಲ್ಲಿ ಬುಧವಾರ ಬೀರೂರು ಶೈಕ್ಷಣಿಕ ವಲಯದ ಪ್ರೌಢಶಾಲಾ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಪರಕಲ್ಪನೆಗಳು ಮೊಳಕೆಯೊಡೆದು ಮುಂದಿನ ದಿನಗಳಲ್ಲಿ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಕೌಶಲ ರೂಪಿಸಲು ಸಹಾಯಕವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದು ಬೆಳೆಯಬೇಕೆಂದು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿರುವ ವಿಜ್ಞಾನ ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಅರ್ಥೈಸಿಕೊಂಡರೆ ವಿಜ್ಞಾನದ ಪರಿಕಲ್ಪನೆಗಳು ಸುಲಭವಾಗಿ ಅರ್ಥವಾಗುತ್ತವೆ. ಇದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಜ್ಞಾನ ಪಡೆಯಲು ಸಹಾಯವಾಗುತ್ತದೆ ಎಂದರು.

ಡಯಟ್ ಉಪನ್ಯಾಸಕ ಶಿವಕುಮಾರ್ ಮಾತನಾಡಿ, ವಿಜ್ಞಾನ ವಿಚಾರಗೋಷ್ಠಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಂಶೋಧನಾ ಭಾವನೆಗಳನ್ನು ಉದ್ದೀಪನಗೊಳಿಸಲು ಹಾಗೂ ಶಿಕ್ಷಕರ ಜ್ಞಾನಾರ್ಜನೆಗೆ ಸಹಾಯವಾಗಿದೆ ಎಂದರು.

ವಿಜ್ಞಾನ ಕೇಂದ್ರ ಅಧ್ಯಕ್ಷ ಸಂಪತ್‌ಕುಮಾರ್ ಮಾತನಾಡಿ, ವಿಜ್ಞಾನ ವಿಚಾರಗೋಷ್ಠಿಗಳು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸವಾಲು ಒಡ್ಡುವುದರ ಜತೆಗೆ ಅವರ ಭಾಷಾ ಸಾಮರ್ಥ್ಯ ಹಾಗೂ ಜ್ಞಾನ ಹುಡುಕುವ ಹಾಗೂ ದೇಶಕ್ಕಾಗಿ ಏನಾದರೂ ಸಾಧಿಸಬೇಕೆಂಬ ಭಾವನೆ ಮೂಡಿಸುತ್ತವೆ ಎಂದರು.

ವಿಜ್ಞಾನ ಸಂಘದ ಕಾರ್ಯದರ್ಶಿ ಮಂಜುಳಾ ಮಾತನಾಡಿ, ಬೋಧನೆ, ಕಲಿಕಾ ಪ್ರಕ್ರಿಯೆ ಜತೆಗೆ ಇಂಥ ಗೋಷ್ಠಿಗಳು ಮತ್ತು ನಾಟಕ ಸ್ಪರ್ಧೆಗಳು ಮನೋಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದರು.

ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸಖರಾಯಪಟ್ಟಣ ಸರ್ಕಾರಿ ಪ್ರೌಢಶಾಲೆಯ ಪಿ.ಎಂ.ಹರ್ಷಿತಾ ಪ್ರಥಮ ಸ್ಥಾನ, ಬೀರೂರು ಕ್ರಮುಕ ಪ್ರೌಢಶಾಲೆಯ ಸುಬ್ರಹ್ಮಣ್ಯ ದ್ವಿತೀಯ ಸ್ಥಾನ, ಜೋಡಿತಿಮ್ಮಾಪುರ ಶಾಲೆಯ ಚೇತನ್ ತೃತೀಯ ಸ್ಥಾನ ಪಡೆದರು. ನಾಟಕ ವಿಭಾಗದಲ್ಲಿ ಕ್ರಮುಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಮಾರ್ಗದ ಮಹದೇವಪ್ಪ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಮತ್ತು ನಂದಿಬಟ್ಟಲು ಮುರಾರ್ಜಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರು.

ಅಕ್ಕಮಹಾದೇವಿ ಶಾಲೆ ಶಿಕ್ಷಕ ಲಕ್ಷ್ಮಣ ರೆಡ್ಡಿ, ವೆಂಕಟೇಶ್‌ಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್ ನಾಯಕ್, ರಘು, ಕೆ.ಎಂ.ಅನಂತೇಶ್ ಇದ್ದರು.