ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಕೂಡಿಗೆ ಡಯಟ್ ಉಪ ಪ್ರಾಂಶುಪಾಲ ಕೆ.ಎಸ್.ಶಿವಕುಮಾರ್ ಉದ್ಘಾಟಿಸಿದರು. ನಿರೂಪ ವೆಸ್ಲಿ, ಕೆ.ಜಿ.ನೀಲಕಂಠಪ್ಪ, ವಿ.ವಿಜಯ್, ವೈ.ಎಸ್. ಪರಮೇಶ್ವರಪ್ಪ ಇತರರು ಇದ್ದರು. 
ಜಿಲ್ಲೆ

ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ

ಕುಶಾಲನಗರ: ವಿಜ್ಞಾನ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರ. ವಿದ್ಯಾರ್ಥಿಗಳು ಸಂಶೋಧನೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲ ಕೆ.ಎಸ್.ಶಿವಕುಮಾರ್ ಕರೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಸಂಘದ ಆಶ್ರಯದಲ್ಲಿ ಮಂಗಳವಾರ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಸಂಶೋಧನೆಗಳನ್ನು ಕೈಗೊಳ್ಳಲು ಇಂತಹ ವಸ್ತು ಪ್ರದರ್ಶನಗಳು ಪೂರಕ ಹಾಗೂ ಪ್ರೇರಣೆ ಎಂದು ತಿಳಿಸಿದರು.
ಡಯಟ್ ಉಪನ್ಯಾಸಕರಾದ ನಿರೂಪ ವೆಸ್ಲಿ, ವಿ.ವಿಜಯ್, ನೋಡಲ್ ಅಧಿಕಾರಿ ಕೆ.ಜಿ.ನೀಲಕಂಠಪ್ಪ, ಕಾಲೇಜಿನ ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ, ಬಿ.ಆರ್.ಪಿ. ಎಸ್.ಎನ್.ಲೋಕೇಶ್, ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ವಿಜ್ಞಾನ ಶಿಕ್ಷಕಿ ಕೆ.ಎಸ್.ಅನಿತಾ ಇತರರು ಇದ್ದರು.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಿದ್ದರು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಭೂಮಿ, ಬಾಹ್ಯಾಕಾಶ, ಪರಿಸರ, ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಕ್ಷೇತ್ರದ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು. ಮಳೆ ನೀರು ಕೊಯ್ಲು, ಜಲಪಾತ, ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಹತ್ತಾರು ಮಾದರಿಗಳು ಗಮನ ಸೆಳೆದವು.