ಜಿಲ್ಲೆ

ವಿಜ್ಞಾನ ಎಂಬುದು ಹೊಸ ಹೊಸ ಆವಿಷ್ಕಾರಗಳು ತರಂಗ ರೂಪ:ಶ್ರೀ ಶಂಭುನಾಥ ಸ್ವಾಮೀಜಿ

ಹಾಸನ : ವಿಜ್ಞಾನ ಎಂಬುದು ಜ್ಞಾನದಿಂದ ಕೂಡಿದ್ದು, ಹೊಸ ಹೊಸ ಆವಿಷ್ಕಾರಗಳು ತರಂಗ ರೂಪದಲ್ಲಿ ನಮ್ಮ ಸುತ್ತ ತಿರುಗಾಡುತ್ತಿರುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ನಗರದ ಎಂ.ಜಿ. ರಸ್ತೆ ರವೀಂದ್ರ ನಗರದ ಬಳಿ ಇರುವ ಬಿಜಿಎಸ್ ವಿಜ್ಞಾನ ಮತ್ತು ಕಾಮರ್ಸ್ ಪಿಯು ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಬಿಜಿಎಸ್ ಸೈನ್ಸ್ ಫೆಸ್ಟಿವಲ್-2023’ ಕಾರ್ಯಕ್ರಮ ಉದ್ಘಾಟಿಸಿ ಆರ್ಶೀರ್ವಚನದಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಭವಿಷ್ಯ ರೂಪಿಸಿಕೊಳ್ಳುವ ಸಮಯ. ತಂದೆ- ತಾಯಿ ಕಂಡಂತ ಕನಸ್ಸನ್ನು ನನಸು ಮಾಡಲು ನಿಮ್ಮ ಈ ಸಮಯ ಪ್ರಥಮ ಹೆಜ್ಜೆಯಾಗಿದೆ ಎಂದರು.
ಕಳೆದುಕೊಂಡಂತಹ ಸಮಯ ಮತ್ತೆ ಪಡೆದುಕೊಳ್ಳಲು ಆಗುವುದಿಲ್ಲ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಮುಖ್ಯ ಎಂಬುದನ್ನು ಮರೆಯಬಾರದು. ನೀವು ಮುಂದೆ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳು ಆಗಬೇಕು ಎಂದರೆ ಈ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳವುದು ಅತಿ ಮುಖ್ಯ ಎಂದು ಕಿವಿಮಾತು ಹೇಳಿದರು.
ವಿಜ್ಞಾನ, ಕಾಮರ್ಸ್ ಸೇರಿದಂತೆ ನಾನಾ ವಿಷಯಗಳಿದ್ದು, ಎಲ್ಲವೂ ಕೂಡ ಬಹಳ ಮುಖ್ಯ. ಶ್ರದ್ಧೆಯಿಂದ ಓದಿದರೆ ನಿಮಗೆ ಶ್ರೇಯಸ್ಸು ಸಿಗುತ್ತದೆ. ‘ಜ್ಞಾನಂ ವಿಜ್ಞಾನ ಸಹಿತಂ’ ಎಂದು ಹೇಳುವಂತೆ ಯಾವುದು ಜ್ಞಾನದಿಂದ ಕೂಡಿರುತ್ತದೆ ಅದು ಉತ್ತಮವಾಗಿರುತ್ತದೆ. ವಿಜ್ಞಾನದಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ವಿಜ್ಞಾನದಿಂದ ಒಳ್ಳೆಯದು ಮತ್ತು ಕೆಟ್ಟದು ಎರಡು ಇದೆ. ಪ್ರಸ್ತುತದಲ್ಲಿ ಕಾಣುತ್ತಿರುವ ಇಸ್ರೇಲ್ ಯುದ್ಧದ ಬಗ್ಗೆ ಉದಾಹರಣೆ ನೀಡಿದರು.
ಅವಕಾಶದಿಂದ ಯಾರು ವಂಚಿತರಾಗಬಾರದು. ಸವಾಲನ್ನು ಎದುರಿಸಬೇಕು. ಡಾ.ಎಪಿಜಿ ಅಬ್ದುಲ್ ಕಲಾಂ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಇಂತಹ ವಿಜ್ಞಾನಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಅವರು ವಿಜ್ಞಾನ ಮತ್ತು ಜ್ಞಾನದಿಂದ ಕೂಡಿದ್ದರು. ಶ್ರದ್ಧೆಯಿಂದ ವಿಜ್ಞಾನ ಕಲಿತವರು. ಮಕ್ಕಳನ್ನು ಪ್ರೀತಿಸುತ್ತಿದ್ದರು. ಓದುವ ವೇಳೆ ಸಮಯ ವ್ಯರ್ಥ ಮಾಡಬಾರದು. ಒಮ್ಮೆ ಅಬ್ದುಲ್ ಕಲಾಂ ಅವರು ನಮ್ಮ ಮಠದ ಮಹಾ ಸ್ವಾಮೀಜಿ ಬಳಿ 25 ಸಾವಿರ ಮಕ್ಕಳನ್ನು ಒಟ್ಟಿಗೆ ಸೇರಿಸಲು ಹೇಳಿದರೇ ನಮ್ಮ ಸ್ವಾಮೀಜಿಯವರು 50 ಸಾವಿರ ಮಕ್ಕಳನ್ನು ಸೇರಿಸಿ ಅಬ್ದುಲ್ ಕಲಾಂ ಅವರಿಗೆ ಅಚ್ಚರಿಯನ್ನುಂಟು ಮಾಡಿದರು. ಶ್ರೀ ಆದಿಚುಂಚನಗಿರಿ ಮಠದ ಪೂಜ್ಯ ಸ್ವಾಮೀಜಿಯವರು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿ ನಾನಾ ಕಡೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ವಿದ್ಯೆ ನೀಡುತ್ತಿದ್ದಾರೆ ಎಂದು ಹೇಳಿದರು.
ನಿವೃತ್ತ ಉಪ ಪ್ರಾಂಶುಪಾಲರಾದ ಪಾರ್ಥ ಸಾರಥಿ ಅವರು ವಿಜ್ಞಾನ ಕುರಿತು ಕೆಲ ಸಮಯ ಪ್ರಾಕ್ಟಿಕಲ್ ಪ್ರದರ್ಶನವನ್ನು ಮಕ್ಕಳಿಗೆ ಪ್ರದರ್ಶಿಸಿ ಗಮನ ಸೆಳೆದರು. ಇಂತಹ ವಿಜ್ಞಾನ ಯುಗದಲ್ಲಿ ಮೂಢನಂಬಿಕೆಯ ಬಗ್ಗೆ ವಿಸ್ತಾರವಾಗಿ ತಿಳಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಕೆ.ಬಿ. ದರ್ಶನ್ ಇತರರು ಉಪಸ್ಥಿತರಿದ್ದರು.