ಹೊಳೆನರಸೀಪುರ: ನೇಪಾಳದ ಕಟ್ಮಂಠುವಿನಲ್ಲಿ ಆಯೋಜಿಸಿದ್ದ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ಜಯಗಳಿಸಿ ಪಟ್ಟಣಕ್ಕೆ ಆಗಮಿಸಿದ ಕರಾಟೆ ಪಟುಗಳನ್ನು ಕ್ರೀಡಾಭಿಮಾನಿಗಳು ಸ್ವಾಗತ ಕೋರಿ ಅಭಿನಂದಿಸಿದರು.
ಫೆ.5ರಿಂದ 7ರವರೆಗೆ ಹಮ್ಮಿಕೊಂಡಿದ್ದ 7ನೇ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಮಟ್ಟದ ಸ್ಕ್ವಾಯ್ ಸ್ಪರ್ಧೆಯಲ್ಲಿ ನಾಲ್ಕು ಪದಕ ಪಡೆದು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಕ್ರೀಡಾಭಿಮಾನಿಗಳು ಹೂಗುಚ್ಛ ನೀಡಿ ಸ್ವಾಗತಿಸಿ ವಾದ್ಯಗೋಷ್ಠಿಯಲ್ಲಿ ಮೆರವಣಿಗೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕ್ರೀಡಾಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಬಲಿಜ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ವಿಜೇತ ಕರಾಟೆ ಪಟುಗಳಾದ ಐಸಿರಿ, ವಿ.ಲಿಖಿತ್, ಎಚ್.ಎ.ಹರ್ಷವರ್ಧನ್‌ಗೆ ಬೆಳ್ಳಿ ಪದಕ ಹಾಗೂ ಪ್ರೇಮಕುಮಾರ್‌ಗೆ ಬಲಿಜ ಸಂಘದ ಅಧ್ಯಕ್ಷ ವೆಂಕಟೇಶ್ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್ ಕಂಚಿನ ಪದಕಗಳನ್ನು ವಿತರಿಸಿ ಗೌರವಿಸಲಾಯಿತು.
ತರಬೇತುದಾರ ಅಬ್ದುಲ್‌ಹೈ ಮಾತನಾಡಿ, ತರಬೇತಿ ಪಡೆದು ಹಲವಾರು ಮಕ್ಕಳು ಅನೇಕ ವರ್ಷಗಳಿಂದ ರಾಜ್ಯ ಮತ್ತು ಅಂತಾರಾಜ್ಯ ಹಾಗೂ ನೇಪಾಳದಲ್ಲಿ ನಡೆದ ಸ್ಪರ್ಧೆಯಲ್ಲಿ ಜಯಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಫೆ.20ರಿಂದ 22ರವರೆಗೆ ಹರಿಯಾಣದಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ ಹೊಳೆನರಸೀಪುರದ ಸ್ಕ್ವಾಯ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳಾದ ಹರ್ಷವರ್ಧನ್, ಎಚ್.ಎಂ.ಹಜ್ಮತ್ ಉನ್ನಿಸಾ, ಶಮಿತಾ ದಯಾಳ್ ಭಾಗವಹಿಸಲಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕರಾಟೆ ಪಟುಗಳು ಪ್ರತಿಭೆಯನ್ನು ಪ್ರದರ್ಶಿಸಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ, ವಸಂತಯ್ಯ, ಕೆ.ಎ.ರವಿಕುಮಾರ್, ಎಚ್.ವಿ.ರವಿಕುಮಾರ್, ಅಭಿ, ನಾಝೀರ್ ಇದ್ದರು.