ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಶುಕ್ರವಾರ ಪತ್ನಿ ಚೆನ್ನಮ್ಮ, ಮಕ್ಕಳಾದ ಅನಸೂಯಾ, ಶೈಲಜಾ ಜತೆ ಆಗಮಿಸಿ ಹಾಸನಾಂಬ ದೇವಿಯ ದರ್ಶನ ಪಡೆದರು.
ದೇವಾಲಯಕ್ಕೆ ಬೆಳಗ್ಗೆ 9.30ಕ್ಕೆ ದೇವೇಗೌಡರು ಆಗಮಿಸಿದಾಗ ವಾದ್ಯಗೋಷ್ಠಿ ವಾದನದೊಂದಿಗೆ ಜಿಲ್ಲಾಡಳಿತ ಅವರನ್ನು ಗೌರವದಿಂದ ಬರಮಾಡಿಕೊಂಡಿತು. ನಂತರ ಪತ್ನಿ ಚೆನ್ನಮ್ಮ ಅವರೊಂದಿಗೆ ಕುಟುಂಬಸಮೇತ ದೇವಾಲಯದ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ದೇವೇಗೌಡರು ಹಾಸನಾಂಬ ದೇವಿಗೆ ಸೀರೆ, ಹೂವು, ಹಣ್ಣುಗಳನ್ನು ಅರ್ಪಿಸಿ ಭಕ್ತಿ ಪೂರ್ವಕವಾಗಿ ನಮಿಸಿದರು. ನಂತರ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೂ ಆಗಮಿಸಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ ಕುಟುಂಬದ ಎಲ್ಲಾ ಸದಸ್ಯರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು.
ಹಾಸನಾಂಬೆ ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಪ್ರತಿ ವರ್ಷ ಕುಟುಂಬ ಸಮೇತವಾಗಿ ಬಂದು ಹಾಸನಾಂಬೆ ತಾಯಿ ದರ್ಶನ ಮಾಡುತ್ತೇನೆ. ದೇವಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾರೆ. ದೇವಿಯ ಗರ್ಭಗುಡಿಯೊಳಗೆ ಹಚ್ಚಿಟ್ಟ ದೀಪ ವರ್ಷವಾದರೂ ಆರುವುದಿಲ್ಲ. ಒಂದು ವರ್ಷ ಆನಂದವಾಗಿ ಉರಿಯುತ್ತದೆ. ಇದು ಇತಿಹಾಸ. ಉತ್ತರದಲ್ಲಿ ವೈಷ್ಣವಿ ದೇವಿ ಇದೇ ಸ್ವರೂಪದ ದೇವರು ಎಂದು ಹೇಳಿದರು.
ಜಿಲ್ಲೆಯ ಅಧಿಕಾರಿ ವರ್ಗ ಹಾಸನಾಂಬೆ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿಂದೆಂದೂ ಇಷ್ಟೊಂದು ವಿಜೃಂಭಣೆಯ ದೀಪಾಲಂಕಾರ ನಾನು ನೋಡಿರಲಿಲ್ಲ. ಎಲ್ಲೆಲ್ಲೂ ವಿದ್ಯುತ್ ದೀಪಾಲಂಕಾರ ಸೊಗಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಎಲ್ಲರ ಸಹಕಾರದಿಂದ ಉತ್ತಮವಾಗಿ ಆಯೋಜನೆ ಮಾಡಿದ್ದಾರೆ ಎಂದು ಕೊಂಡಾಡಿದರು. ದೇವಿಯಲ್ಲಿ ಆರೋಗ್ಯ ಕೊಡು ಎಂದು ಕೇಳಿಕೊಂಡಿದ್ದೇನೆ. ಮುಂದಿನ ಬಾರಿ ಆ ತಾಯಿ ದರ್ಶನಕ್ಕೆ ನಡೆದುಕೊಂಡು ಬರುವ ಶಕ್ತಿ ಕೊಡು ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.