ಬೇಲೂರು: ಬೇಲೂರು ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವದ ನಂತರ ಬುಧವಾರ ನಡೆದ ನಾಡ ರಥೋತ್ಸವವು (ದೊಡ್ಡ ತೇರು) ಅತ್ಯಂತ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಾವುದೇ ಗೊಂದಲವಿಲ್ಲದೆ ಅದ್ದೂರಿಯಾಗಿ ನೆರವೇರಿತು.
ನಾಡ ರಥೋತ್ಸವಕ್ಕೂ ಮೊದಲು ದೇಗುಲಕ್ಕೆ ಸಂಬಂಧಿಸಿದ ನಾಡ ಪಟೇಲರು, ದೇವರ ತನದ ಪಟೇಲರು ಹಾಗೂ ಗ್ರಾಮ ಪಟೇಲರನ್ನು ದೇಗುಲ ವ್ಯವಸ್ಥಾಪನ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ನಾಡ ಪಟೇಲರು ಮಂಗಳವಾದ್ಯದೊಂದಿಗೆ ಸಂಪ್ರದಾಯದಂತೆ ಗೌರವ ವಂದನೆ ಸ್ವೀಕರಿಸಿದ ನಂತರ ನಾಡ ಪಟೇಲರ ತಂಡ ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇವರಿಗೆ ಪೂಜೆ ಸಲ್ಲಿಸಿದ ನಂತರದಲ್ಲಿ ನಾಡ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಗಳವಾರ ಬ್ರಹ್ಮ ರಥೋತ್ಸವದಂದು ರಥವನ್ನು ಮೋಹಿನಿ ಭಸ್ಮಾಸುರ ಮೂಲೆವರೆಗೂ ಭಕ್ತರು ಎಳೆದು ನಿಲ್ಲಿಸಿದ್ದರು. ಆದರೆ, ಬುಧವಾರ ನಾಡ ರಥೋತ್ಸವದಂದು ದೇಗುಲದ ಮೂರು ದಿಕ್ಕುಗಳಲ್ಲೂ ರಥವನ್ನು ಎಳೆದು ಮೂಲ ಸ್ಥಾನಕ್ಕೆ ತಂದು ನಿಲ್ಲಿಸಿ ದೇವರಿಗೆ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತ ಪಡಿಸಿದರು.
ನಾಡರಥ ಚಲಿಸುತಿದ್ದ ಸಂದರ್ಭ ಭಕ್ತರು ನಾ ಮುಂದು ತಾ ಮುಂದು ಎಂಬಂತೆ ಸಾಗಿದ್ದರಿಂದ ಕೆಲಕಾಲ ನೂಕು ನುಗ್ಗಲು ಉಂಟಾಗಿತ್ತು. ಅದನ್ನು ಪೊಲೀಸರು ಸರಿಪಡಿಸಿದರು.
ರಥೋತ್ಸವದಲ್ಲಿ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಶಾಸಕ ಕೆ.ಎಸ್. ಲಿಂಗೇಶ್, ಮುಖಂಡರಾದ ಎಚ್.ಕೆ.ಸುರೇಶ್, ಸಿದ್ದೇಶ್ ನಾಗೇಂದ್ರ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.