ಜಿಲ್ಲೆ

ವಿಜೃಂಭಣೆಯಿಂದ ಜರುಗಿದ ಕುರುಬನಕಟ್ಟೆ ಕಂಡಾಯೋತ್ಸವ

*ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಂದ ಮೆರವಣಿಗೆಗೆ ಚಾಲನೆ

ಚಾಮರಾಜನಗರ: ನಗರದ 15 ನೇ ವಾರ್ಡ್ ನ ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಕುರುಬನಕಟ್ಟೆ ಚೆನ್ನಯ್ಯ,ಲಿಂಗಯ್ಯ ಕಂಡಾಯೋತ್ಸವ ವಿಜೃಂಭಣೆಯಿಂದ ನೆರವೇರಿತು.

ನಗರದ ಕೊಳದ ಬೀದಿಯಲ್ಲಿರುವ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ ದೇವಸ್ಥಾನದಲ್ಲಿ ಕಂಡಾಯಗಳನ್ನು ವಿವಿಧ ಹೂ, ಹೊಂಬಳೆಯಿಂದ ಅಲಂಕರಿಸಿ, ವಿಶೇಷಪೂಜೆ ಸಲ್ಲಿಸಲಾಯಿತು. ಬಳಿಕ ಸಾಗಿದ ಮೆರವಣಿಗೆ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಶ್ರೀ ಆದಿಶಕ್ತಿ ದೇವಸ್ಥಾನ, ಡಿವಿಯೇಷನ್ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಡಾ.ಬಾಬು ಜಗಜೀವನರಾಂ ಬಡಾವಣೆಯ ತಲುಪಿತು. ಈ ವೇಳೆ ಬಡಾವಣೆಯ ಬೀದಿಗಳಲ್ಲಿ ಸಾಗಿ ನಿವಾಸಿಗಳು ಕಂಡಾಯಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು.

ಧಾರ್ಮಿಕ ಉತ್ಸವ ಸತ್ತಿಗೆ ಸೂರಿಪಾನಿ, ತಮಟೆ, ಡೊಳ್ಳು ಕುಣಿತ, ಪೂಜಾ ಕುಣಿತ, ಗೊರವರ ಕುಣಿತ, ವೀರಗಾಸೆ, ಚಿಲಿಪಿಲಿ ಗಾಡಿ ಗೊಂಬೆ, ಕೊಂಬು ಕಹಳೆ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ಬಳಿಕ ವೇದಿಕೆ ಕಾರ್ಯಕ್ರಮ ಹಾಗೂ ಶಿವರಾಜ್ ಕುಮಾರ್ ಮ್ಯೂಸಿಕಲ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೆರವಣಿಗೆಯಲ್ಲಿ ಸಮಿತಿ ಅಧ್ಯಕ್ಷ ಚಾ.ಗು.ನಾಗರಾಜ್, ಕಾರ್ಯದರ್ಶಿ ಎಚ್.ಎಚ್.ನಾಗರಾಜು, ಉಪಾಧ್ಯಕ್ಷ ಸಿದ್ದಪ್ಪಾಜಿ, ಲಿಂಗಣ್ಣ, ಚಿನ್ನಸ್ವಾಮಿ, ರಾಜೇಶ್, ಕುಮಾರ್, ಶಿವಮೂರ್ತಿ, ಇತರರು ಭಾಗವಹಿಸಿದ್ದರು.

ಈ ಭಾಗದ ಆರಾಧ್ಯದೈವ:

ಶ್ರೀ ಮಂಟೇಸ್ವಾಮಿ ನಮ್ಮ ಭಾಗದ ಆರಾಧ್ಯ ದೈವವಾಗಿದ್ದಾರೆ ಎಂದು ಎಂಎಸ್ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಕಂಡಾಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಕುರುಬನಕಟ್ಟೆ ಚೆನ್ನಯ್ಯ, ಲಿಂಗಯ್ಯ ಕಂಡಾಯಗಳ ಧಾರ್ಮಿಕ ಉತ್ಸವ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣೆಗೆಯಾಗಿದೆ. ಈ ಭಾಗದ ಆರಾಧ್ಯದೈವ, ಪವಾಡಪುರುಷ ಶ್ರೀ ಮಂಟೇಸ್ಚಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀಚನ್ನಯ್ಯ, ಶ್ರೀ ಲಿಂಗಯ್ಯ ದೇವರ ಸರ್ವರಿಗೂ ನೆಮ್ಮದಿ ಬದುಕು ತರಲಿ ಎಂದು ಆಶಿಸಿದರು.