ಜಿಲ್ಲೆ

ವಿಜೃಂಭಣೆಯ ಸೌಮ್ಯಕೇಶವಸ್ವಾಮಿ ರಥೋತ್ಸವ

ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.


ಸಂಪ್ರದಾಯದಂತೆ ಕಳೆದ ಒಂದು ವಾರದಿಂದ ಧ್ವಜಾರೋಹಣೋತ್ಸವ, ಹಂಸ ವಾಹನೋತ್ಸವ ಹಾಗೂ ಯಾಗಶಾಲಾ ಪ್ರವೇಶಗಳು ನಡೆದವು. ಮಂಗಳವಾರ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಉತ್ಸವಗಳು, ಪಂಚಾಮೃತ ಅಭಿಷೇಕ, ಹೋಮ ನೆರವೇರಿದವು.

ದೇವಾಲಯದ ಪ್ರಾಕಾರದಲ್ಲಿ ನಡೆಸಲಾದ ಪರಂಪರಾಗತ ಮೆರವಣಿಗೆ ಮತ್ತು ಉಯ್ಯಲೆ ಸೇವೆ ನಂತರ ರಥದ ಮೇಲೆ ಉತ್ಸವ ಮೂರ್ತಿ ಆಸೀನವಾದ ನಂತರ ಗರುಡ ಪಕ್ಷಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿತು. ವೇದ ಘೋಷಗಳೊಂದಿಗೆ ರಥೋತ್ಸವ ಪಟ್ಟಣದ ಒಳಸುತ್ತಿನ ಬೀದಿಗಳಲ್ಲಿ ಸಾಗಿತು. ನಂತರ ದೇವಾಲಯದ ಆವರಣಕ್ಕೆ ಬಂದು ಸೇರಿತು. ಸೌಮ್ಯಕೇಶವಸ್ವಾಮಿ ಬ್ರಹ್ಮ ರಥೋತ್ಸವ ಮಹಾ ನಿವೇದನಾ ಸೇವಾ ಸಮಿತಿಯಿಂದ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.