ಚಾಮರಾಜನಗರ: ಸುಮಾರು 16 ಗ್ರಾಮಗಳ ಅದಿ ದೇವತೆ ಎಂದೇ ಕರೆಯುವ ಶ್ರೀಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಹಾಗೂ ಮಡೆಸೇವೆ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ತಾಲೂಕಿನ ಚಂದಕವಾಡಿ ಗ್ರಾಮದ ಶ್ರೀಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಎರಡನೇ ದಿನದ ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಚಂದಕವಾಡಿ ಮಾತ್ರವಲ್ಲದೇ ಹೋಬಳಿಯ ವಿವಿಧ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀಲಕ್ಷ್ಮೀದೇವಿಯ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಧೂಪವನ್ನು ಹಾಕುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರು. ಕೊಂಡದ ಧೂಳನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಧನ್ಯರಾದರು. ಎರಡನೇ ದಿನದ ಜಾತ್ರೆಯಲ್ಲಿ ಮಡೆ ಸೇವೆಗೆ ವಿಶಿಷ್ಟ ಸ್ಥಾನವಿದ್ದು, ದೇವಾಲಯದ ಆವರಣದಲ್ಲಿ ನಡೆದ ಮಡೆ ಉತ್ಸವದ ವೇಳೆ ಹರಕೆ ಹೊತ್ತ ಭಕ್ತರು, ಬೆಳಗ್ಗೆಯೇ ಸ್ನಾನಮಾಡಿ, ಮಡಿ ಬಟ್ಟೆ ಉಟ್ಟು ದೇವಾಲಯದ ಆವರಣದಲ್ಲೆ ಒಲೆ ಹಚ್ಚಿ ಅಕ್ಕಿ, ಬೆಲ್ಲ ಹಾಕಿ ಅಡುಗೆ ಸಿದ್ಧಪಡಿಸಿದರು. ನಂತರ ಅದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿದರು. ಬಳಿಕ ಪ್ರಸಾದವನ್ನು ತಮ್ಮ ಮನೆಗಳಿಗೆ ಕೊಂಡೊಯ್ದರು. ಲಕ್ಷ್ಮೀ ದೇವಿಯ ವೈಶಿಷ್ಟ್ಯ ಇರುವುದು ದೇವಾಲಯದ ಆವರಣದಲ್ಲಿ ನಡೆಯುವ ಮಡೆ ಉತ್ಸವದಲ್ಲಿ ಎಂಬುದು ಭಕ್ತರ ನಂಬಿಕೆಯಾಗಿದೆ. ಜಾತ್ರಾ ಆವರಣದಲ್ಲಿ ವಿವಿಧ ಗ್ರಾಮಗಳಿಂದ ಬಂದಿದ್ದ ಜಾನುವಾರುಗಳು ಜಾತ್ರಾ ಮಹೋತ್ಸವದ ಮೆರುಗನ್ನು ಹೆಚ್ಚಿಸಿತು. ಈ ಜಾತ್ರೆಯನ್ನು ದನಗಳ ಜಾತ್ರೆ ಎಂದೇ ಕರೆಯುವ ವಾಡಿಕೆ ಇದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಜಾನುವಾರುಗಳು ನೆರೆದಿದ್ದವು. ವಿವಿಧ ಗ್ರಾಮಗಳಲ್ಲಿ ಹಬ್ಬ ಆಚರಿಸಿದ ಜನರು ಕುಟುಂಬ ಸಮೇತರಾಗಿ ಜಾತ್ರೆಗೆ ಆಗಮಿಸಿ ಶ್ರೀಲಕ್ಷ್ಮೀ ದೇವಿ ಅಮ್ಮನವರ ಕೃಪೆಗೆ ಪಾತ್ರರಾದರು.
ಹಲವು ಗ್ರಾಮಗಳಲ್ಲಿ ಹಬ್ಬ:
ತಾಲೂಕಿನ ಚಂದಕವಾಡಿ ಶ್ರೀಲಕ್ಷ್ಮೀ ದೇವಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಚಂದಕವಾಡಿ ಸಹಿತ ಹಲವಾರು ಗ್ರಾಮಗಳಲ್ಲಿ ಗ್ರಾಮದೇವತೆ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು. ಅರಳೀಪುರ, ದಡದಹಳ್ಳಿ, ಕುರಿಯನಕಟ್ಟೆ, ಸರಗೂರು, ಸರಗೂರು ಮೋಳೆ, ಬಸಪ್ಪನಪಾಳ್ಯ, ಅಯ್ಯನಪುರ, ಹುರಳಿನಂಜನಪುರ, ಕೊಕ್ಕನಹಳ್ಳಿ, ಹಂಚಿತಾಳಪುರ ಹಾಗೂ ಇತರ ಗ್ರಾಮಗಳಲ್ಲಿ ಹಬ್ಬದ ಮೆರುಗು ಕಂಡುಬಂದಿತು. ಹಬ್ಬದ ಅಂಗವಾಗಿ ಗ್ರಾಮಗಳ ಪ್ರಮುಖ ರಸ್ತೆಗಳನ್ನು ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಗ್ರಾಮಗಳ ದೇವಾಲಯಗಳನ್ನು ತಳಿರು-ತೋರಣ ಹಾಗೂ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಈ ಗ್ರಾಮಗಳ ಜನರು ತಮ್ಮ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಊಟೋಪಚಾರ ಮಾಡಿದರು. ಹಲವಾರು ಗ್ರಾಮಗಳಲ್ಲಿ ಯುವಕರು ಕುಣಿದುಕುಪ್ಪಳಿಸುತ್ತಿದ್ದ ದೃಶ್ಯಗಳು ಸರ್ವೇಸಾಮಾನ್ಯವಾಗಿತ್ತು.
ಧೂಳುಮಯ ರಸ್ತೆಗಳು:
ತಾಲೂಕಿನ ಚಂದಕವಾಡಿ ಗ್ರಾಮದಿಂದ ದಡದಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡಿದ್ದರಿಂದ ರಸ್ತೆಗಳು ಧೂಳುಮಯವಾಗಿತ್ತು. ದ್ವಿಚಕ್ರ ವಾಹನ ಸವಾರರು ರಸ್ತೆಗಳಲ್ಲಿ ಸಂಚಾರ ಮಾಡಲು ಪರದಾಡಿದರು. ಕೆಲವು ವೇಳೆಯಲ್ಲಿ ಟಿಪ್ಪರ್, ಲಾರಿ ಹಾಗೂ ಇನ್ನಿತರೆ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರಿಂದ ಹಲವಾರು ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಕೆಲವು ಗ್ರಾಮಗಳಲ್ಲಿ ರಸ್ತೆಗಳು ಕಿರಿದಾದ್ದರಿಂದ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಯಿತು.
ರಥೋತ್ಸವ ಇಂದು:
ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿಯ ರಥೋತ್ಸವ ಶುಕ್ರವಾರ ನಡೆಯಲಿದೆ. ಬಣ್ಣದ ಬಟ್ಟೆಗಳಿಂದ ಅಲಂಕೃತವಾದ ತೇರಿನೊಳಗೆ ಶ್ರೀ ಲಕ್ಷ್ಮೀದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯ ಆವರಣದ ಸುತ್ತ ತೇರನ್ನು ಎಳೆಯಲಾಗುತ್ತದೆ. ಶ್ರೀಲಕ್ಷ್ಮೀದೇವಿ ದೇವಸ್ಥಾನವನ್ನು ಸುಮಾರು ಮೂರು ಸುತ್ತು ಹಾಕುವ ಮೂಲಕ ರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಚಂದಕವಾಡಿಯ ಶ್ರೀಲಕ್ಷ್ಮೀದೇವಿ ಜಾತ್ರೆಯನ್ನು ಪ್ರತಿವರ್ಷವೂ ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ. ಅದರಂತೆ ಈ ವರ್ಷವೂ ಕೂಡ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದೇವೆ. ನೂರಾರು ವರ್ಷಗಳ ಇತಿಹಾಸ ಇರುವ ಜಾತ್ರೆ ನಮ್ಮ ಜನಮೂಲ ಸಂಸ್ಕೃತಿಯನ್ನು ಬಿಂಬಿಸುತ್ತದೆ.
-ಶಿವಣ್ಣ, ರೇಚಂಬಳ್ಳಿ, ಚಾಮರಾಜನಗರ