ಚಾಮರಾಜನಗರ: ತಾಲೂಕಿನ ಚಂದಕವಾಡಿಯಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಶ್ರೀಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಸಂಜೆ 5.15 ಗಂಟೆಗೆ ಶ್ರೀಲಕ್ಷ್ಮೀದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪನೆ ಮಾಡಲಾಯಿತು. ವಿವಿಧ ಪೂಜಾಕೈಂಕರ್ಯಗಳನ್ನು ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.
ಸಾವಿರಾರು ಭಕ್ತರು ಶ್ರೀಲಕ್ಷ್ಮೀದೇವಿ ಅಮ್ಮನವರ ಪರ ೋಷಣೆಗಳನ್ನು ಕೂಗುವ ಮೂಲಕ ಸುಮಾರು 200 ಮೀಟರ್ ದೂರದಷ್ಟು ತೇರನ್ನು ಎಳೆದರು. ಸುಮಾರು 5.45 ರ ಸಮಯಕ್ಕೆ ರಥವನ್ನು ಸ್ವಸ್ಥಾನಕ್ಕೆ ತರಲಾಯಿತು. ಇದಕ್ಕೂ ಮುನ್ನ ರಥದ ಮುಂಭಾಗ ಹುಲಿವಾಹನ, ಸತ್ತಿಗೆ, ಛತ್ರಿ-ಚಾಮರ ಹಾಗೂ ನಂದಿಧ್ವಜಗಳು ಸಾಗಿದವು. ಈ ಸಂದರ್ಭದಲ್ಲಿ ಚಂದಕವಾಡಿ, ಅಂಚಿತಾಳಪುರ ಹಾಗೂ ಇನ್ನಿತರೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.
ಉತ್ತಮ ರಾಸುಗಳಿಗೆ ಬಹುಮಾನ:
ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಜಾನುವಾರುಗಳ ಪರಿಷೆ ನಡೆಯಿತು. ಜಾತ್ರೆಯಲ್ಲಿ ಭಾಗವಹಿಸಿದ್ದ ಜಾನುವಾರುಗಳಲ್ಲಿ ಉತ್ತಮ ಎನಿಸಿಕೊಂಡ ರಾಸುಗಳಿಗೆ ಬಹುಮಾನ ನೀಡಲಾಯಿತು. ಸುಮಾರು ಮೂರು ದಿನಗಳ ಜಾತ್ರಾಮಹೋತ್ಸವಕ್ಕೆ ಶ್ರೀಲಕ್ಷ್ಮೀದೇವಿ ಅಮ್ಮನವರ ರಥೋತ್ಸವದ ಮೂಲಕ ತೆರೆ ಬಿದ್ದಂತಾಯಿತು.