ಜಿಲ್ಲೆ

ವಿಜೃಂಭಣೆಯ ಶ್ರೀ ಸಿದ್ದಪ್ಪಾಜಿ, ದೊಡ್ಡಮ್ಮತಾಯಿ ಕೊಂಡೋತ್ಸವ

ಕೊಳ್ಳೇಗಾಲ ತಾಲೂಕಿನ ಶ್ರೀ ಕನಕಗಿರಿ ಗುಡ್ಡದ ಮಾರಮ್ಮನ ದೇವಾಲಯದಲ್ಲಿ ಸೋಮವಾರ ಶ್ರೀ ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ, ಗುಡ್ಡದ ಮಾರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಕನಕಗಿರಿ ಗುಡ್ಡದ ಮಾರಮ್ಮನ ದೇವಾಲಯ ಆವರಣದಲ್ಲಿ ಸೋಮವಾರ ಶ್ರೀ ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ, ಗುಡ್ಡದ ಮಾರಮ್ಮನ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ಕೊಂಡೋತ್ಸವದ ಪ್ರಯುಕ್ತ ಗ್ರಾಮದ ಉಪ್ಪಾರ ಬಡಾವಣೆ ತಳಿರು, ತೋರಣ, ರಂಗೋಲಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಕೊಂಡೋತ್ಸವ ಸಂಬಂಧ ನೆಂಟರು ಹೆಚ್ಚಿನ ಸಂಖ್ಯೆಯಲ್ಲಿ ಮನೆ ಮನೆಗೂ ಆಗಮಿಸಿದ್ದರು. ಸೋಮವಾರ ಬೆಳಗ್ಗೆ ಗ್ರಾಮದ ಶ್ರೀ ಸಿದ್ದಪ್ಪಾಜಿ ಕಂಡಾಯಗಳನ್ನು ಗ್ರಾಮದ ಹೊರಗಿರುವ ಗುಡಿ ಬಾವಿಯಲ್ಲಿ ಶುಚಿಗೊಳಿಸಿ ಹೂ, ಹೊಂಬಾಳೆಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.


ನಂತರ, ಮೆರವಣಿಗೆ ಮೂಲಕ ಬಂದ ಕಂಡಾಯಗಳು, ಬಸವ, ಸತ್ತಿಗೆ, ಸೂರಾಪಾನಿಗಳನ್ನು ಹೊತ್ತ ದೇವರು ಗುಡ್ಡರು, ಗುಡ್ಡದ ಮಾರಮ್ಮನ ದೇವಾಲಯದ ಆವರಣದಲ್ಲಿ ಹಾಕಲಾಗಿದ್ದ ಕೊಂಡವನ್ನು ಸಾವಿರಾರು ಜನರ ಹರ್ಷೋದ್ಘಾರದ ನಡುವೆ ಹಾಯ್ದಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಭಕ್ತರು ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ದೊಡ್ಡಿಂದುವಾಡಿ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಸಾವಿರಾರು ಜನರು ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಪವಾಡಕ್ಕೆ ಸಾಕ್ಷಿಯಾದರು. ಆನಂತರ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಕಂಡಾಯಗಳ ಮೆರವಣಿಗೆ ನಡೆಯಿತು. ನೀರೆಯರು ಹೂ, ಹಣ್ಣು, ಕಾಯಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.