ಜಿಲ್ಲೆ

ವಿಜೃಂಭಣೆಯ ಶ್ರೀ ನಿಮಿಷಾಂಬೆ ವರ್ಧಂತಿ ಮಹೋತ್ಸವ

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನ ಶ್ರೀನಿಮಿಷಾಂಬ ದೇವಾಲಯದಲ್ಲಿ ಬುಧವಾರ ಶಕ್ತಿದೇವತೆ ಶ್ರೀನಿಮಿಷಾಂಬೆ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ್‌ಭಟ್ ಅವರ ನೇತೃತ್ವದಲ್ಲಿ ಎಂ.ಕೆ.ಭಟ್ ಮತ್ತು ವೈದಿಕರ ತಂಡ ಪೂರ್ವದಿನ ಮಂಗಳವಾರ ಸಂಜೆ ಗಣಪತಿಪೂಜೆ, ಪುಣ್ಯಾಹ, ಮಹಾಸಂಕಲ್ಪ, ಕಳಸ ಸ್ಥಾಪನೆ, ಸಪ್ತಶತಿ ಪಾರಾಯಣ, ಕಳಸ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಗಿತ್ತು.

ಅಮ್ಮನವರ ವರ್ಧಂತಿ ದಿನದಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಕೃಷ್ಣ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎಲ್.ದಯಾನಂದ್ ಅವರ ನೇತೃತ್ವದಲ್ಲಿ ಸಮಿತಿ ಸದಸ್ಯರು ನಿಮಿಷಾಂಬ ಹೋಮ, ದುರ್ಗ ಹೋಮ ನೆರವೇರಿಸಿ ಪೂರ್ಣಾಹುತಿ ಅರ್ಪಿಸಿದ್ದು, ಕಳಸ ಪೂಜೆಯೊಂದಿಗೆ 121 ಕಲಶಗಳ ಮಹಾ ಜಲಾಭಿಷೇಕವನ್ನು ಅಪೂರ್ವ ಬೀಜಾಕ್ಷರ ಸಹಿತವಿರುವ ತಾಯಿಗೆ ನೆರವೇರಿಸಿದ್ದು, ನಂತರ ಅಷ್ಟದಿಗ್ಬಲಿಯೊಂದಿಗೆ ಮಹಾಮಂಗಳಾರತಿ ಅರ್ಪಿಸಿ ವಿಶೇಷ ಹೋವು, ರೇಷ್ಮೆ ವಸ್ತ್ರಗಳು ಹಾಗೂ ಒಡವೆಗಳೊಂದಿಗೆ ಸರ್ವಾಲಂಕೃತಗೊಂಡ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.

ಅಮ್ಮನವರ ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೂ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನದೊಂದಿಗೆ ವಿಶೇಷ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿದರು.