ಹನೂರು ತಾಲೂಕಿನ ಗಡಿಯಂಚಿನ ಗೋಪಿನಾಥಂ ಗ್ರಾಮದಲ್ಲಿ ಬುಧವಾರ ರಾತ್ರಿ ಶ್ರೀ ಶಕ್ತಿ ಮಾರಿಯಮ್ಮನ್ ದೇವಸ್ಥಾನದ ಮುಹೂರ್ತ ಕಂಬವನ್ನು ಮೆರವಣಿಗೆ ಮಾಡಲಾಯಿತು. 
ಜಿಲ್ಲೆ

ವಿಜೃಂಭಣೆಯ ಶಕ್ತಿ ಮಾರಿಯಮ್ಮನ್ ಕಂಬೋತ್ಸವ

ಚಾಮರಾಜನಗರ: ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಶ್ರೀ ಶಕ್ತಿ ಮಾರಿಯಮ್ಮನ್ ಕಂಬೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.


ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವಿದ್ಯುತ್ ದೀಪ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರು ಕಾಡಿಗೆ ಹೋಗಿ ಮುಹೂರ್ತ ಕಂಬವನ್ನು ತಯಾರಿಸಿ, ಅದರ ಮೇಲೆ ಶ್ರೀ ಶಕ್ತಿ ಮಾರಿಯಮ್ಮನ್ ದೇವರ ಚಿತ್ರ ಬಿಡಿಸಿದ್ದು ವಿಶೇಷವಾಗಿತ್ತು. ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಕಾವೇರಿ ನದಿಗೆ ಹೋಗಿ ಮುಹೂರ್ತ ಕಂಬವನ್ನು ಅಗ್ಗದಿಂದ ಕಟ್ಟಿ ನದಿಗೆ ಬಿಡಲಾಯಿತು. ಸಂಜೆ ಗ್ರಾಮದ ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಕಾವೇರಿ ನದಿಗೆ ಹೋಗಿ ಪೂಜೆ ಸಲ್ಲಿಸಲಾಯಿತು.


ನಂತರ ಮುಹೂರ್ತ ಕಂಬವನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆ ಗ್ರಾಮದ ಸಮೀಪ ಬರುತ್ತಿದ್ದಂತೆ ಮಹಿಳೆಯರು ರಸ್ತೆಗೆ ನೀರು ಹಾಕಿ ಭಕ್ತಿ ಮೆರೆದರು. ದೇವಸ್ಥಾದ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಮೆರವಣಿಗೆ ಅಂತ್ಯಗೊಂಡಿತು. ಬಳಿಕ ದೇವಸ್ಥಾನದ ಮುಂದೆ ಮೂರ್ಹತ ಕಂಬವನ್ನು ನೆಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮಸ್ಥರಿಗೆ ಪ್ರಸಾದ ವಿತರಿಸಲಾಯಿತು.