ಹೊಸದುರ್ಗ: ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಶುಕ್ರವಾರ 87 ನೇ ವರ್ಷದ ದಿಂಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ಬಾಂಧವರು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಉತ್ಸವದ ಪೂರ್ವಭಾವಿಯಾಗಿ ಗುರುವಾರ ದೇವಾಲಯದಲ್ಲಿ ಪೋತಿ ಸ್ಥಾಪನೆ ಮಾಡಲಾಗಿತ್ತು. ಬದರಿನಾಥ್ ಸಂಗಡಿಗರಿಂದ ಜ್ಞಾನೇಶ್ವರಿ ಪ್ರವಚನ, ಪಾವುಲ್ ಭಜನೆ, ಪಾಳಿ ಭಜನೆ, ಬಾರೂಡ ಭಜನೆ ಕಾರ್ಯಕ್ರಮಗಳು ನಡೆಸಲಾಗಿತ್ತು.
ಶುಕ್ರವಾರ ಬೆಳಗ್ಗೆ ದೇವಾಲಯದಲ್ಲಿ ಕಾಕಡಾರತಿಯೊಂದಿಗೆ ದಿಂಡಿ ಉತ್ಸವ ಆರಂಭವಾಯಿತು. ವಿಠ್ಠಲ ರುಕುಮಾಯಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ ಸೇವೆಗಳು ನೆರವೇರಿದವು.
ಉತ್ಸವ ಮೂರ್ತಿಗಳ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ವಾಹನವನ್ನು ವಿವಿಧ ಹೂಮಾಲೆಗಳಿಂದ ಶೃಂಗರಿಸಲಾಗಿತ್ತು. ಪ್ರಮುಖ ರಸ್ತೆಯ ಮೂಲಕ ಸಾಗಿದ ಉತ್ಸವದಲ್ಲಿ ಸಮಾಜದ ಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು.
ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಭಜನಾ ಮಂಡಳಿಯ ಕಲಾವಿದರು ಉತ್ಸವದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಕಾಲ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರುಕ್ಮಿಣಿ ಪಾಂಡುರಂಗರನ್ನು ಆರಾಧಿಸಲಾಯಿತು.