ತಿ.ನರಸೀಪುರ: ಪಟ್ಟಣದಲ್ಲಿ ಶ್ರೀ ಗುಂಜಾನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ದೇವಸ್ಥಾನದ ಮುಂಭಾಗ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ರಥಕ್ಕೆ ತಹಸೀಲ್ದಾರ್ ಸಿ.ಜೆ.ಗೀತಾ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಭಕ್ತರು ರಥ ಎಳೆದರು. ದೇವಾಲಯ ಮುಂಭಾಗದಿಂದ ಆರಂಭಗೊಂಡ ರಥೋತ್ಸವ ವಿಶ್ವ ಕರ್ಮ ರಸ್ತೆ, ಪ್ರಾಥಮಿಕ ಶಾಲೆ ರಸ್ತೆ ಮೂಲಕ ತೇರಿನ ಬೀದಿಗೆ ಆಗಮಿಸಿ ಯಾವುದೇ ಅಡತಡೆ ಇಲ್ಲದೆ ಸ್ವಸ್ಥಾನ ತಲುಪಿತು.
ಅಲಂಕೃತ ಗೊಂಡಿದ್ದ ರಥದಲ್ಲಿ ವೀರಾಜಮಾನರಾಗಿದ್ದ ಮಹಾಲಕ್ಷ್ಮಿ ಸಮೇತ ಶ್ರೀ ಗುಂಜಾನರಸಿಂಹಸ್ವಾಮಿ ಉತ್ಸವ ಮೂರ್ತಿಗಳನ್ನು ಕಂಡು ಭಕ್ತರು ಪುಳಕಿತರಾದರು. ಈ ವೇಳೆ ರಥಕ್ಕೆ ಹಣ್ಣು-ಧವನ ಎಸೆದು ಧನ್ಯತೆ ಮೆರೆದರು. ರಥೋತ್ಸವದ ಹಿನ್ನೆಲೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವಕರು ಬಣ್ಣದೋಕುಳಿ ಆಡುವ ಮೂಲಕ ಜಾತ್ರೆಗೆ ರಂಗು ತಂದರು.
ರಥೋತ್ಸವದ ಅಂಗವಾಗಿ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಪ್ರಧಾನ ಅರ್ಚಕ ಸಂಪತ್ ಕುಮಾರ್, ಆಗಮಿಕ ಶ್ರೀಧರ್ ಭಟ್, ಸಹಾಯಕ ವೆಂಕಟೇಶ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯ,ಅಭಿಷೇಕ, ಉತ್ಸವಗಳು ಸಾಂಗವಾಗಿ ನೆರವೇರಿದವು.
ಪಾನಕ, ಮಜ್ಜಿಗೆ ವಿತರಣೆ: ನೆತ್ತಿ ಸುಡುವ ಉರಿ ಬಿಸಿಲು ಭಕ್ತರ ಧಾರ್ಮಿಕ ಆಚರಣೆಗೆ ಅಡ್ಡಿಯಾಗಲಿಲ್ಲ. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಜ್ಜಿಗೆ,ಪಾನಕ ಹಾಗೂ ಪ್ರಸಾದ ವಿತರಣೆ ಮಾಡುವ ಮೂಲಕ ಭಕ್ತರ ದಾಹ ನೀಗಿಸಿದರು.
ಮಂಟಪೋತ್ಸವ: ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮಂಟಪೋತ್ಸವ ನಡೆಯಿತು. ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ವೇದ ಮಂತ್ರ ಪಠಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಸಂಪ್ರದಾಯ ಪಾಲನೆ: ಸಂಪ್ರದಾಯದಂತೆ ವ್ಯಾಸರಾಜಪುರ ಗ್ರಾಮದ ಯಜಮಾನರು ಆಲಗೂಡು ಗ್ರಾಮಕ್ಕೆ ತೆರಳಿ ಅಲ್ಲಿನ ಯಜಮಾನರನ್ನು ರಥೋತ್ಸವ ದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿ ಅವರನ್ನು ಕರೆತಂದರು. ಪಟ್ಟಣದ ಯಜಮಾನರ ಜತೆಗೂಡಿ ಮಹಾ ಮಂಗಳಾರತಿ ನೆರವೇರಿಸಿ ಪ್ರದಕ್ಷಿಣೆ ಹಾಕಿದರು. ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿ ನೆರವೇರಿದ ನಂತರ ಬ್ರಹ್ಮ ರಥೋತ್ಸವ ಆರಂಭವಾಯಿತು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಅಶ್ವಿನ್ ಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಪುರಸಭಾಧ್ಯಕ್ಷ ನಂಜುಂಡಸ್ವಾಮಿ, ಸದಸ್ಯ ಬಾದಾಮಿ ಮಂಜು, ಎಸ್.ಕೆ.ಕಿರಣ್ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.