ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದ ಆದಿಶಕ್ತಿ ಕಾಳಿಕಾಂಬ ದೇವಿಯ 60ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ತಾಲೂಕಿನ ಶ್ರೀ ಆದಿಶಕ್ತಿ ವೆಂಕಟರಮಣಸ್ವಾಮಿ ಮಹಾಕ್ಷೇತ್ರದಲ್ಲಿ ಕಳೆದ ಎರಡು ದಿನಗಳಿಂದಲೂ ಹಲವು ಪೂಜಾ ವಿಧಿ ವಿಧಾನಗಳು ನೆರವೇರಿದವು. ಶುಕ್ರವಾರ ರಾತ್ರಿ ವೆಂಕಟೇಶ್ವರ ಸ್ವಾಮಿಗೆ ಪ್ರಥಮ ಪೂಜೆ ನಂತರ ಅಡುಗೆ ಮಾಡಲು ಪ್ರಾರಂಭಿಸಿ ನಂತರ ಅಮ್ಮನವರಿಗೆ ಮಡಲಕ್ಕಿ ತುಂಬುವುದು ಇನ್ನಿತರ ಪೂಜಾ ಕೈಂಕರ್ಯಗಳು ಜರುಗಿದವು. ಶನಿವಾರ ಬೆಳಗ್ಗೆ 5 ಗಂಟೆಗೆ ಆದಿಶಕ್ತಿ ಅಮ್ಮನವರ ಗಿಂಡಿ ಉತ್ಸವ, ಬಾಯಿಬೀಗ, ತಂಬಿಟ್ಟಿನಾರತಿ, ಇನ್ನಿತರ ಪೂಜಾ ವಿಧಿ ವಿಧಾನಗಳು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತರಲಾಯಿತು.
ಬೆಳಗ್ಗೆ 8 ಗಂಟೆಗೆ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಳಿಕ ತಲೆಮುಡಿ, ಅಭಿಷೇಕ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಸಂಜೆಯವರೆಗೂ ಜರುಗಿದವು. ಕಿರುತೆರೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ತಾಲೂಕಿನ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಪ್ರಧಾನ ಅರ್ಚಕ ರಾಮಣ್ಣ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.