ಜಿಲ್ಲೆ

ವಿಜೃಂಭಣೆಯ ಕೆಂಡಗಣ್ಣಸ್ವಾಮಿ ಪಲ್ಲಕ್ಕಿ ಉತ್ಸವ

ಹನೂರು: ತಾಲೂಕಿನ ಕಾಡಂಚಿನ ಅಲಗುಮೂಲೆ ಗ್ರಾಮದ ಶ್ರೀ ಕೆಂಡಗಣ್ಣಸ್ವಾಮಿ ದೇಗುಲದಲ್ಲಿ ಶನಿವಾರ ರಾತ್ರಿ ಹುಣ್ಣಿಮೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷ ಹೊಸ್ತಲ ಹುಣ್ಣಿಮೆಯಂದು ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಸ್ವಾಮಿಯ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದೇಗುಲವನ್ನು ತಳಿರು ತೋರಣ, ಹೂಗಳು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಜೆ ದೇಗುಲದಲ್ಲಿ ಪೂಜೆ ನೆರವೇರಿಸಲಾಯಿತು. ಅರ್ಚಕರು ಹಾಗೂ ಭಕ್ತರು ಮಂಗಳ ವಾದ್ಯದೊಂದಿಗೆ ಸತ್ತಿಗೆ, ಸೂರಿಪಾನಿ, ನಂದಿಕಂಬ ಹಾಗೂ ಪಂಚ ಕಳಸ ಸಮೇತ ಗ್ರಾಮದ ಹೊರವಲಯದ ಮುಂಬೆಟ್ಟದಲ್ಲಿ ನೆಲೆಸಿರುವ ಕೆಂಡಗಣ್ಣಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ತೀರ್ಥವನ್ನು ಮೆರವಣಿಗೆ ಮೂಲಕ ಗ್ರಾಮದ ಕೆಂಡಗಣ್ಣಸ್ವಾಮಿ ದೇಗುಲಕ್ಕೆ ತಂದು ಪೂಜೆ ಸಲ್ಲಿಸಲಾಯಿತು.

ವಿಜೃಂಭಣೆಯ ಪಲ್ಲಕ್ಕಿ ಉತ್ಸವ:

ರಾತ್ರಿ 11 ಗಂಟೆಗೆ ಕೆಂಡಗಣ್ಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಬನ್ನಿಮಂಟಪದಿಂದ ಹೊರಟು ಮೆರವಣಿಗೆ ಸುಮಾರು 2 ಗಂಟೆಗಳ ಕಾಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಹೆಣ್ಣು ಮಕ್ಕಳು ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದರು. ಕೆಲ ಭಕ್ತರು ಹರಕೆ ಕಾಣಿಕೆಗಳನ್ನು ಸಲ್ಲಿಸಿದರು. ರಾತ್ರಿ ದೇಗುಲದ ಮುಂಭಾಗದಲ್ಲಿ ಹರಿಕಥೆ ಆಯೋಜಿಸಲಾಗಿತ್ತು. ಈ ಮೂಲಕ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಭಾನುವಾರ ಬೆಳಗ್ಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಗ್ರಾಮದ ಹೊರ ಹೊಲಯದಲ್ಲಿರುವ ಮಲ್ಲೇಶ್ವರಸ್ವಾಮಿ ದೇಗುಲಕ್ಕೆ ಕೊಂಡೊಯ್ದು ಪ್ರದಕ್ಷಿಣೆ ಹಾಕಲಾಯಿತು. ಹನೂರು ಸೇರಿದಂತೆ ಕೊಳ್ಳೇಗಾಲ, ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಚಿಂಚಳ್ಳಿ, ಮಂಗಲ, ಕಣ್ಣೂರು, ಆನಾಪುರ, ಚನ್ನಾಲಿಂಗನಹಳ್ಳಿ, ಲೊಕ್ಕನಹಳ್ಳಿ, ಆರ್.ಎಸ್.ದೊಡ್ಡಿ, ಚಂಗವಾಡಿ, ಭೈರನತ್ತ ಗ್ರಾಮಗಳಿಂದ ಜನರು ಆಗಮಿಸಿದ್ದರು.