ಜಿಲ್ಲೆ

ವಿಜೃಂಭಣೆಯ ಓಂಕಾರೇಶ್ವರ ಸ್ವಾಮಿ ಜಾತ್ರೆ

ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ದೇವರಿಗೆ ಎಣ್ಣೆ ಮಜ್ಜನ ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಹತ್ತಾರು ಗ್ರಾಮಗಳ ದೇವರನ್ನು ಕರೆತಂದು ಉತ್ಸವ ನಡೆಸಿ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ರಥೋತ್ಸವ ನಡೆಸಲಾಯಿತು. ದೇವಾಲಯದ ಆವರಣದಿಂದ ವೀರಭದ್ರನ ಕುಣಿತ, ನಂದಿಧ್ವಜ ಕುಣಿತ, ವೀರಗಾಸೆ, ಡೊಳ್ಳು ಕುಣಿತ ಹಾಗೂ ಸೋಮನ ಕುಣಿತದೊಂದಿಗೆ ದೇವರ ಮೂರ್ತಿಗಳನ್ನು ಬೆಳ್ಳಿ ರಥದಲ್ಲಿ ಕೂರಿಸಿ ಉತ್ಸವದಲ್ಲಿ ಕೊಂಡೊಯ್ಯಲಾಯಿತು.

ಭಾನುವಾರ ಸಂಜೆ ಮೂಲ ದೇವರಿಗೆ ಗ್ರಾಮದ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಿ ಅಭಿಷೇಕ, ಪ್ರಸಾದ ವಿನಿಯೋಗದ ನಂತರ ಹೆಬ್ಬಳಲು ಗ್ರಾಮಸ್ಥರಿಂದ ಕಳಸ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ತರಲಾಯಿತು. ಮಹಿಳೆಯರು ದೇವರಿಗೆ ತಂಬಿಟ್ಟಿನ ಆರತಿ ಬೆಳಗಿ ಹರಕೆ ತೀರಿಸಿದರು. ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಉಯ್ಯಲೆ ಉತ್ಸವದ ನಂತರ ಪಲ್ಲಕ್ಕಿ ಉತ್ಸವ ನಡೆಯಿತು. ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಆರಂಭದ ದಿನ ಹಸಿರು ಕಂಬದ ಧ್ವಜಾರೋಹಣ ನೆರವೇರಿಸಿ, ಹಸಿರು ಹೂವಿನ ಚಪ್ಪರ ಪೂಜೆ, ಅಭಿಷೇಕ, ಮಂಗಳಾರತಿ ಮಾಡಲಾಯಿತು. ಹತ್ತಿ ಮರದ ಮಣಿ ಪೀಠದ ಪೂಜೆ, ಕಳಸ ಸ್ಥಾಪನೆ, ಗಂಗೆಪೂಜೆ, ಗೋಪೂಜೆ ಧಾರ್ಮಿಕ ವಿಧಾನಗಳನ್ನು ನಡೆಸಲಾಯಿತು.

ಗ್ರಾಮದ ಮುಖಂಡರಾದ ನಾಗರಾಜು, ಮಹದೇವಸ್ವಾಮಿ, ಶಿವಲಿಂಗಯ್ಯ, ಶಿವಮೂರ್ತಿ, ಪಾಪಣ್ಣ, ಸಿದ್ದರಾಜು, ನಾಗಯ್ಯ, ಕೂಸಣ್ಣ, ಪ್ರಸನ್ನ, ಲೋಕೇಶ್, ಅಶೋಕ್ ಕುಮಾರ್, ಸಿದ್ದರಾಜು, ಹೊಣಕಾರ, ರಾಜೇಶ್, ರವಿ ಇತರರು ಭಾಗವಹಿಸಿದ್ದರು.