ವಿರಾಜಪೇಟೆ: ಪ್ರವಾದಿ ಹಜರತ್ ಮುಹಮ್ಮದ್ ಅವರ 1500ನೇ ವರ್ಷದ ಜನ್ಮದಿನವಾದ ಈದ್‌ಮಿಲಾದ್ ಹಬ್ಬವನ್ನು ಕಲ್ಲುಬಾಣೆಯ ಬದ್ರಿಯ ಜುಮಾ ಮಸೀದಿ ಹಾಗೂ ದಾರುಲ್ ಇಸ್ಲಾಂ ಮದ್ರಾಸದ ವತಿಯಿಂದ ಇತ್ತೀಚೆಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕಲ್ಲುಬಾಣೆಯ ಬದ್ರಿಯಾ ಮಸೀದಿಯಿಂದ ಪಂಜರಪೇಟೆವರೆಗೆ ಅದ್ದೂರಿ ಸಂದೇಶ ಜಾಥಾ ನಡೆಯಿತು. ಹಸಿರು ಧ್ವಜಗಳೊಂದಿಗೆ ಮಕ್ಕಳು, ಯುವಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಬಿಯವರ ಪ್ರೀತಿಯ ಘೋಷಣೆಗಳನ್ನು ಮೊಳಗಿಸಿದರು. ಊರಿನ ಬೀದಿಗಳಲ್ಲಿ ಮೆರವಣಿಗೆ ಸಾಗಿದಾಗ, ಧಾರ್ಮಿಕ ಉತ್ಸಾಹದ ಜತೆಗೆ ಸೌಹಾರ್ದತೆ ಸಂದೇಶ ಹರಡಿತು.
ಕಾರ್ಯಕ್ರಮದ ನಂತರ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಕೆ.ಆಪ್ಸಲ್ ವಹಿಸಿದ್ದರು. ಉಸ್ತಾದ್ ಅಲಿ ಬಕ್‌ಅವಿ ಅವರು ಉಪಸ್ಥಿತರಾಗಿದ್ದರು. ಬದ್ರಿಯ ಜುಮಾ ಮಸೀದಿ ಹಾಗು ದಾರುಲ್ ಇಸ್ಲಾಂ ಮದ್ರಸದ ಆಡಳಿತ ಮಂಡಳಿಯ ಸದಸ್ಯರು, ಧಾರ್ಮಿಕ ಪಂಡಿತರು ಹಾಗೂ ಗಣ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.