ಜಿಲ್ಲೆ

ವಿಜೃಂಭಣೆಯ ಆಂಜನೇಯ ಸ್ವಾಮಿ ರಥೋತ್ಸವ

ಹನಗೋಡು: ಹನಗೋಡು ಹೋಬಳಿಯ ಇತಿಹಾಸ ಪ್ರಸಿದ್ಧ ದೊಡ್ಡಹೆಜ್ಜೂರಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ರಥೋತ್ಸವಕ್ಕೂ ಮುನ್ನ ದೇವಸ್ಥಾನದಿಂದ ಆಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಮಧ್ಯಾಹ್ನ 1.30 ಗಂಟೆಗೆ ರಥಕ್ಕೆ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೆ ಏರಿಸಲಾಯಿತು. ನಂತರ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಹಾಕುತ್ತಾ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದು ತಂದು ಸ್ವಸ್ಥಾನಕ್ಕೆ ನಿಲ್ಲಿಸಿದರು.

16 ಹಳ್ಳಿಗೆ ಸೇರಿದ ದೇವಾಲಯದ ಜಾತ್ರೆಗೆ ಸುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಮುಂಜಾನೆಯಿಂದಲೇ ದೇವಾಲಯದ ಪ್ರಧಾನ ಅರ್ಚಕ ಸಂಪತ್ ಕುಮಾರ್ ನೇತೃತ್ವದಲ್ಲಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕ ಜರುಗಿದವು. ನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿ ಹೊತ್ತು ಪ್ರದಕ್ಷಿಣೆ ಹಾಕಿದರು.

ಹರಕೆ ಹೊತ್ತವರು ಹಿಂದಿನ ದಿನವೇ ಜಾತ್ರೆ ಮಾಳದಲ್ಲಿ ಬೀಡು ಬಿಟ್ಟಿದ್ದರು. ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ತಲೆ ಮುಡಿಕೊಟ್ಟು ಬಂದವರು, ಬಾಯಿಬೀಗ ಹಾಕಿಕೊಂಡು ನಡೆದು ಬಂದು ದೇವಾಲಯ ಸುತ್ತ ಉರುಳು ಸೇವೆ ಸಲ್ಲಿಸಿದರು. ನದಿ ದಂಡೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಕೆಲವರು ಮನೆಯಿಂದ ತಂದಿದ್ದ ತಿಂಡಿ-ಊಟವನ್ನು ನದಿ ದಂಡೆ, ಕೆರೆಯಂಗಳ ಹಾಗೂ ಗದ್ದೆ ಬಯಲಲ್ಲಿ ಸೇವಿಸಿದರು.

ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯನಿರ್ವಾಹಣಾಧಿಕಾರಿ ರಘು, ಹುಣಸೂರು ನಗರ ಅಭಿವೃದ್ಧಿ ಯೋಜನೆ ಪ್ರಾಧಿಕಾರ ಅಧ್ಯಕ್ಷ ಎಚ್.ಪಿ.ಅಮರ್‌ನಾಥ್, ಗ್ರಾಪಂ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷ ವೆಂಕಟೇಶ್, ಹುಣಸೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಘು, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಗರನಹಳ್ಳಿ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ಜೆಡಿಎಸ್ ಮುಖಂಡರಾದ ರಂಜಿತಾ ಚಿಕ್ಕಮಾದು, ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಶಿವಶಂಕರ್, ದೇವರಾಜ್, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಲೋಕೇಶ್, ಕಿರಂಗೂರು ಗ್ರಾಪಂ ಅಧ್ಯಕ್ಷ ದಾಸನಪುರ ಹರೀಶ್, ದೇವಾಲಯ ಸಮಿತಿ ಅಧ್ಯಕ್ಷ ಶೇಖರೇಗೌಡ, ಕಾರ್ಯದರ್ಶಿ ನಟರಾಜ್, ಉದ್ಯಮಿಗಳಾದ ರಾಜು ಶಿವರಾಜೇಗೌಡ, ಕೋಡಿ ಟಿ.ಕೃಷ್ಣ, ಡಾ.ಕಾರ್ತಿಕ್ ವೆಂಕಟಪ್ಪ, ಎಚ್.ವಿ.ಗಣೇಶ್, ಮುಖಂಡರಾದ ನಟರಾಜ್, ಬಸವರಾಜ್, ನಾಗುಗೌಡ, ಕಸ್ತೂರಿಗೌಡ, ನಾಗೇಶ್, ಬೀರಪ್ಪ, ಕುಮಾರ್, ನವೀನ್ ಇದ್ದರು.

ಪೊಲೀಸ್ ಇಲಾಖೆಯಿಂದ ವಾಹನ ದಟ್ಟಣೆ ಉಂಟಾಗದಂತೆ ಕೆರೆ ಕೋಡಿ ಭಾಗದ ಜಮೀನು ಸೇರಿದಂತೆ ಗ್ರಾಮದ 4 ಕಡೆ ವಾಹನ ನಿಲುಗಡೆಗೆ ಸೂಕ್ತ ಜಾಗ ವ್ಯವಸ್ಥೆ ಮಾಡಲಾಗಿತ್ತು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎನ್.ಮುನಿಯಪ್ಪ, ಎಸ್‌ಐ ರಾಧಾ ನೇತೃತ್ವದ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಾತ್ರೆ ಹಿನ್ನೆಲೆಯಲ್ಲಿ ಸಿಹಿ ತಿಂಡಿ, ಆಟಕೆ ಅಂಗಡಿಗಳನ್ನು ತೆರೆಯಲಾಗಿತ್ತು. ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ಶಿಕ್ಷಕಿ ಛಾಯಾ ಸುನೀಲ್ , ಧರ್ಮಿಚಂದ್ ಶೆಟ್, ರೈತರಾದ ಧನು, ನಟೇಶ್, ಬೀರಪ್ಪ, ಲಕ್ಷ್ಮಣ್ ಅನ್ನದಾಸೋಹ ಏರ್ಪಡಿಸಿದ್ದರು.