ಬೌದ್ಧ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಹಾಗೂ ದಲಿತ ಸಂಘಟನೆಗಳ ಮುಖಂಡ ಅನಿಲ್‌ಕುಮಾರ್ 
ಜಿಲ್ಲೆ

ವಿಜಯೋತ್ಸವಕ್ಕೆ ದಲಿತ ಸಮುದಾಯದಿಂದ ಮಾತ್ರ ಹಣ ಸಂಗ್ರಹ

ಚಿಕ್ಕಮಗಳೂರು: ಕೋರೆಂಗಾವ್ ೨೦೭ನೇ ವಿಜಯೋತ್ಸವದ ಖರ್ಚುವೆಚ್ಚಕ್ಕಾಗಿ ದಲಿತ ಸಮುದಾಯದವರಿಂದ ಮಾತ್ರ ಹಣ ಸಂಗ್ರಹಿಸಲಾಗಿದೆ ಎಂದು ಬೌದ್ಧ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಹಾಗೂ ದಲಿತ ಸಂಘಟನೆಗಳ ಮುಖಂಡ ಅನಿಲ್‌ಕುಮಾರ್ ಸ್ಪಷ್ಟಪಡಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷ ಮತ್ತು ಸಂಘಟನೆಯಲ್ಲಿರುವ ದಲಿತರಿಂದ ಮಾತ್ರ ಹಣ ಸಂಗ್ರಹಿಸಲಾಗಿದೆಯೇ ಹೊರತು ಬೇರೆಯವರಿಂದ ಹಣಪಡೆದುಕೊಂಡಿಲ್ಲ. ಸಮಾಜಕ್ಕೆ ಉತ್ತರದಾಯಿತ್ವರಾಗಬೇಕಾಗಿರುವುದರಿಂದ ಖರ್ಚುವೆಚ್ಚದ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ನೀಡಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಜ. ೮ರಂದು ನಡೆದ ಕೋರೆಂಗಾವ್ ವಿಜಯೋತ್ಸವಕ್ಕೆ ನಿರೀಕ್ಷೆಗೂ ಮೀರಿ ಜನಬಂದಿದ್ದಾರೆ. ಸುಮಾರು ೧೫ಸಾವಿರ ಮಂದಿ ಪಾಲ್ಗೊಂಡಿದ್ದರು. ನೀಲಿ ಬಾವುಟಗಳನ್ನು ಹಿಡಿದು ಡಿಜೆಯೊಂದಿಗೆ ಹೆಜ್ಜೆಹಾಕಿದ್ದಾರೆ ಎಂದು ವಿವರಿಸಿದರು.

ಸಂಘಟನಾತ್ಮಕ ಮತ್ತು ಒಗ್ಗಟ್ಟಿನ ಪ್ರದರ್ಶನ ಇದಾಗಿದೆ. ಕೆಲವು ಪಕ್ಷದವರು ಭೀಮಸಂಗಮ ಕಾರ್ಯಕ್ರಮ ಆಯೋಜಿಸಿರುವುದು ಸರಿಯಷ್ಟೇ. ಬೇರೆ ಸಮುದಾಯಕ್ಕೂ ತಲುಪಿಸುವ ಕೆಲಸ ಆಗಬೇಕಿದೆ. ಘನತೆಯ ಬದುಕು ಪ್ರತಿಯೊಬ್ಬರಿಗೂ ಸಲ್ಲಬೇಕಾಗಿದೆ ಎಂದು ಹೇಳಿದರು.

ಬಹುತ್ವ ಭಾರತ ಮತ್ತು ಸಂಸ್ಕೃತಿಯ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಬಗ್ಗೆ ಅಸಹನೆಯನ್ನು ತೋರಲಾಗುತ್ತಿದೆ. ಬೆಳವಾಡಿ ಸಮೀಪದ ನರಸೀಪುರದಲ್ಲಿ ಅಧಿಕಾರಿಗಳ ನೆರವಿನೊಂದಿಗೆ ದೇಗುಲ ಪ್ರವೇಶಿಸಬೇಕಾಗಿದೆ. ಆಲ್ದೂರಿನಲ್ಲಿ ಪರಿಶಿಷ್ಟರ ಶವಸಂಸ್ಕಾರಕ್ಕೂ ಅಡ್ಡಿ ಉಂಟಾಯಿತು. ಇಂತಹ ಪರಿಸ್ಥಿತಿಯಲ್ಲಿ ದಲಿತರು ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಎಚ್ಚರಿಸಿದರು.

ಸ್ವಾಭಿಮಾನ ಮತ್ತು ಶೌರ್ಯದ ಭೀಮ ಕೋರೆಂಗಾವ್ ವಿಜಯೋತ್ಸವ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭೀಮ್ ಆರ್ಮಿಯ ಗೌರವಾಧ್ಯಕ್ಷ ಹೊನ್ನೇಶ್, ವಿವಿಧ ಸಂಘಟನೆ ಮುಖಂಡರಾದ ಹುಣಸೇಮಕ್ಕಿ ಲಕ್ಷö್ಮಣ್, ಉಪ್ಪಳಿ ರಾಜು, ಕಿರಣ್ ಇದ್ದರು.