ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಲವು ಕಡತಗಳಿಗೆ ವಿಜಯೇಂದ್ರ ಅವರು ತಂದೆಯ ನಕಲಿ ಸಹಿ ಮಾಡಿದ್ದಾರೆ. ಈ ಕುರಿತು ತನಿಖೆಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರೇ ಈ ಕುರಿತು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ವಿಜಯೇಂದ್ರ ಅವರು ಯಾವ ಯಾವ ಕಡತಗಳಿಗೆ ತಂದೆಯ ನಕಲಿ ಸಹಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಿ ಎಂದರು.
ನನ್ನ ವಿರುದ್ಧ ದೂರುಗಳನ್ನು ಕೊಟ್ಟು ಬಿಜೆಪಿ ಕಚೇರಿ ಒಂದು ರೂಮ್ ತುಂಬಿ ಹೋಗಿದೆ. ಇತ್ತೀಚೆಗೆ ಹೈಕಮಾಂಡ್ನವರು ನೋಟಿಸ್ ಕೊಟ್ಟಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೇನೆ. ನನ್ನ ವಿರುದ್ಧ ದೂರು ಕೊಡಲು ವಿರೋಧ ಬಣ ದೆಹಲಿ ಅಲ್ಲ, ವಾಷಿಂಗ್ಟನ್ಗೆ ಹೋಗಲಿ. ಸತ್ಯ ಯಾವತ್ತೂ ಸತ್ಯವೇ ಆಗಿರುತ್ತದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ನಮ್ಮ ಬಣ ಸಿದ್ಧವಿದೆ. ಅಧ್ಯಕ್ಷರು ಯಾರಬೇಕು ಎಂಬುದನ್ನು ನಮ್ಮ ಬಣದ ಕೋರ್ ಕಮಿಟಿ ನಿರ್ಧರಿಸುತ್ತದೆ. ಹೈಕಮಾಂಡ್ ಮಧ್ಯಪ್ರವೇಶಿಸಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ವಿಜಯೇಂದ್ರ ಅವರಿಗೆ ಇನ್ನೊಂದು ಅವಧಿಗೆ ಮುಂದುವರಿಯುವ ಆಸೆಯಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಅಳಿದು ಉಳಿದಿದ್ದನ್ನು ಲೂಟಿ ಮಾಡುವ ಆಸೆ ಇದೆಯಾ? ರಾಜ್ಯದ ಜನರು ಇಂಥ ಕಳ್ಳರನ್ನು ಒಪ್ಪಿಕೊಳ್ಳಬೇಕಾ ? ನಕಲಿ ಸಹಿ ಮಾಡಿ ಕೊಳ್ಳೆ ಹೊಡೆಯುವ ಆಸೆ ಇದೆಯಾ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಕ್ಕೆ 70 ಬಾರಿ ತಿದ್ದುಪಡಿ ಮಾಡಿರುವ ಕಾಂಗ್ರೆಸ್ಗೆ ಜೈ ಭೀಮ್ ಎನ್ನಲು ಅರ್ಹತೆ ಇಲ್ಲ. ಮಹಾತ್ಮ ಗಾಂಧಿಗೆ ಗೊಡ್ಸೆ ಹೊಡೆದಿದ್ದು ಒಂದು ಗುಂಡು. ಇನ್ನೂ ಎರಡು ಗುಂಡು ಯಾರದ್ದು? ಈ ಬಗ್ಗೆ ಕೋರ್ಟ್ ಕಲಾಪದಲ್ಲಿ ಚರ್ಚೆಯಾಗಿದೆ. ಎರಡು ಗುಂಡು ಹೊಡೆಸಿದ್ದು ನೆಹರು ಎಂಬ ಶಂಕೆ ಇದೆ. ನೆಹರು ಅವರಿಗೆ ತಾವೇ ಸರ್ವಾಧಿಕಾರಿಯಾಗಬೇಕು ಎಂಬ ಧೋರಣೆ ಇತ್ತು ಎಂದು ಹೇಳಿದರು.
ಮುಡಾ ಹಗರಣದಲ್ಲಿ ಯಾರು ಸಾಚಾ ಇಲ್ಲ. 185 ಕೋಟಿ ವಾಲ್ಮೀಕಿ ನಿಗಮದ ಹಗರಣವನ್ನು ಸಿಎಂ ಒಪ್ಪಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಯಾರನ್ನು ಟಾರ್ಗೆಟ್ ಮಾಡಿಲ್ಲ. ಆದರೆ, ರಾಜ್ಯದಲ್ಲಿ ನನ್ನ ಮತ್ತು ಸಿಟಿ ರವಿ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದೂಗಳ ಪರವಾಗಿ ಮಾತನಾಡಿದರೆ ಕೇಸ್ ಹಾಕುತ್ತಾರೆ. ಆದರೆ ವಿಜಯೇಂದ್ರ ಮೇಲೆ ಪ್ರಕರಣ ದಾಖಲು ಮಾಡುವುದಿಲ್ಲ. ಹಿಂದೂಗಳ ಭಾವನೆ ಕೇರಳಿಸಿ, ರಾಜ್ಯದಲ್ಲಿ ದಂಗೆ ಎಬ್ಬಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.