ಜಿಲ್ಲೆ

‘ವಿಜಯಾನಂದ’ ವೀಕ್ಷಿಸಿದ ಡಾ. ಸಂಕೇಶ್ವರ ಅಭಿಮಾನಿಗಳು

Dharwad

ಹುಬ್ಬಳ್ಳಿ : ಹುಬ್ಬಳ್ಳಿಯ ಉದ್ಯಮಿಗಳು ಹಾಗೂ ಡಾ. ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಗರದ ಪಿವಿಆರ್ ಸಿನೆಮಾದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಜೀವನ ಕಥೆ ಹೊಂದಿರುವ ‘ವಿಜಯಾನಂದ’ ಕನ್ನಡ ಚಲನಚಿತ್ರದ ಮೊದಲ ಬಯೋಪಿಕ್​ನ ವಿಶೇಷ ಪ್ರದರ್ಶನ ಆಯೋಜಿಸಿದ್ದರು.

ಗದಗ, ಹುಬ್ಬಳ್ಳಿ, ಹಾವೇರಿ ಹಾಗೂ ಇನ್ನಿತರೆಡೆಯಿಂದ ಡಾ. ವಿಜಯ ಸಂಕೇಶ್ವರ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಉದ್ಯಮಿಗಳು ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ, ಕೆಎಲ್​ಇ ಚೇರ್ಮನ್ ಡಾ. ಪ್ರಭಾಕರ ಕೋರೆ ಹಾಗೂ ಮತ್ತಿತರರು ಪಿವಿಆರ್ ಸಿನೆಮಾ ಹಾಲ್​ನಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ, ಮೈಸೂರು ಟೋಪಿ ತೊಡಿಸಿ ಸನ್ಮಾನಿಸಿದರು. ಈ ಚಲನಚಿತ್ರ ಶತದಿನ ಪೂರೈಸಲಿ ಎಂದು ಹಾರೈಸಿದರು. ವಿಆರ್​ಎಲ್ ಪ್ರೋಡಕ್ಷನ್​ನಿಂದ ಇನ್ನಷ್ಟು ಯಶಸ್ವಿ ಚಿತ್ರಗಳು ನಿರ್ವಣವಾಗಲಿ ಎಂದು ಶುಭಕೋರಿದರು.

ಚಲನಚಿತ್ರ ಪ್ರಾರಂಭಗೊಳ್ಳುವ ಮೊದಲೇ ಪಿವಿಆರ್ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿತ್ತು. ಸಿನೆಮಾ ಪ್ರದರ್ಶನಕ್ಕೂ ಮೊದಲು ಮಾತನಾಡಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ‘ನನ್ನ ಜೀವನದಲ್ಲಿ ಏರುಪೇರುಗಳು ಬಂದಾಗ ಲಕ್ಷಾಂತರ ಬೆಂಬಲಿಗರು ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ. ಕಷ್ಟದ ದಿನಗಳಲ್ಲಿ ನನ್ನೊಂದಿಗೆ ನಿಂತಿದ್ದಾರೆ. ನನ್ನ ಪೂರ್ವಜರ ಹಾಗೂ ಸಾಕಷ್ಟು ಜನರ ಆಶೀರ್ವಾದ ನನಗೆ ಲಭಿಸಿದೆ’ ಎಂದರು.

‘ನನ್ನ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆದಿದ್ದೇನೆ. ನಾನು ಹಾಕಿಕೊಟ್ಟ ಮಾರ್ಗದಲ್ಲಿ ನನ್ನ ಮಗ ಹಾಗೂ ಮೊಮ್ಮಗ ನಡೆಯುತ್ತಿದ್ದಾರೆ. ನನ್ನ ಏಳಿಗೆಯ ಹಿಂದೆ ನಮ್ಮ ಸಂಸ್ಥೆಯ 20 ಸಾವಿರ ಸಿಬ್ಬಂದಿಯ ಸಹಕಾರ ಇದೆ. ನನ್ನ ಧರ್ಮಪತ್ನಿಯ ನೈತಿಕ ಬೆಂಬಲ ಇದೆ.’ ಎಂದು ತಿಳಿಸಿದರು.

ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ, ಮಹೇಂದ್ರ ಸಿಂಘಿ, ಜಿ.ಎಂ. ಚಿಕ್ಕಮಠ, ಶಂಕರಣ್ಣ ಮುನವಳ್ಳಿ, ನಂದಕುಮಾರ, ಗೋವಿಂದ ಜೋಶಿ, ವಿಮಲ ತಾಳಿಕೋಟಿ, ಸಂತೋಷ ಮುರಗಿಪಾಟೀಲ, ಮಹಾವೀರ ಕುಂದೂರ, ಸುಭಾಷ ಹೊಸಮನಿ, ಬಿಪಿನ ಪಾಟೀಲ, ವಿಠ್ಠಲ ರೋಣ, ಕಮಲ ಮೆಹತಾ, ಡಾ. ಜಿ.ಬಿ. ಸತ್ತೂರ, ಡಾ. ಆನಂದ ಪಾಂಡುರಂಗಿ, ರಾಜೇಂದ್ರ ದಿನಕರ, ರಾಜೇಂದ್ರ ಬೀಳಗಿ ಹಾಗೂ ಮತ್ತಿತರರು ಹಾಜರಿದ್ದರು.