ಜಿಲ್ಲೆ

ವಿಜಯಾ ಜ್ಯೋತ್ಸ್ನಾ ಕಲಬುರಗಿ ಡಿಸಿ

ಕಲಬುರಗಿ: ಕೊನೆಗೂ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರನ್ನು ವರ್ಗಾಯಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಕರೊನಾದಿಂದ ದೇಶದಲ್ಲಿಯೇ ಮೊದಲ ಸಾವು ಸಂಭವಿಸಿದ ಕಲಬುರಗಿ ಜಿಲ್ಲೆಯಲ್ಲಿ ಇದನ್ನು ನಿಯಂತ್ರಿಸಲು ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾಗಲೇ ಜಿಲ್ಲಾಧಿಕಾರಿಯನ್ನು ವರ್ಗಾ ಯಿಸಿ ಸರ್ಕಾರ ನಗೆಪಾಟಿಲಿಗೀಡಾಗಿತ್ತು. ನಂತರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರೇ ಖುದ್ದಾಗಿ ಶರತ್ ಅವರ ಜತೆ ಮಾತನಾಡಿ ನಿಮ್ಮ ವರ್ಗಾವಣೆ ರದ್ದಾಗಿದೆ. ನೀವು ಜಿಲ್ಲಾಧಿಕಾರಿಯಾಗಿ ಮುಂದುವರೆಯಿರಿ ಎಂದು ಹೇಳಿದ್ದರು.
ಈ ಎಲ್ಲ ಬೆಳವಣಿಗೆ ಹಿನ್ನಲೆಯಲ್ಲಿ ಇಲ್ಲಿಯೇ ಸೇವೆ ಮುಂದುವರೆಸಿದ್ದ ಶರತ್ ಅವರನ್ನು ಇದೀಗ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
2010ನೇ ಬ್ಯಾಚಿನ ಐಎಎಸ್ ಅಧಿಕಾರಿ ಶ್ರೀಮತಿ ವಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಕಲಬುರಗಿಯ ಹೊಸ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಕಲಬುರಗಿಯಲ್ಲಿ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಜಿಲ್ಲಾಧಿಕಾರಿ ಶರತ್ ಬಿ. ಅವರು ಕರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದ ಜನಮೆಚ್ಚಿದ ಜಿಲ್ಲಾಧಿಕಾರಿ ಎಂದೇ ಹೆಸರುಗಳಿಸಿದ್ದರು.
ಶ್ರೀಮತಿ ವಿಜಯಾ ಜ್ಯೋತ್ಸ್ನಾ ಅವರು ಈಗ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಚಿತ್ರದುರ್ಗ ಇನ್ನಿತರ ಜಿಲ್ಲೆಗಳ ಡಿಸಿಯಾಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಕಲಬುರಗಿ ಜಿಲ್ಲೆಯ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳು ನೊಗವನ್ನು ಹೊತ್ತಂತೆ ಆಗಿದೆ. ಕೆಲ ದಿನಗಳ ಹಿಂದಷ್ಟೆ ಡಾ.ಸಿಮಿ ಮರಿಯಮ್ ಜಾರ್ಜ ಅವರು ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದರ ಬೆನ್ನಲ್ಲಿಯೆ ಡಿಸಿಯಾಗಿ ಜೋತ್ಸ್ನಾ ಆಗಮಿಸಿದ್ದಾರೆ.
2019,ಆಗಸ್ಟ್ 31 ರಂದು ಶರತ್ ಬಿ. ಅವರು ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಏಪ್ರಿಲ್ 28ರಂದು ಅವರನ್ನು ವರ್ಗಾವಣೆಗೊಳಿಸಿ ಕಿಶೋರ ವಿಕಾಸ್ ಸುರಳಕರ್ ಅವರನ್ನು ನೇಮಕ ಮಾಡಿದಾಗ ವಿರೋಧ ಹೆಚ್ಚಿದ್ದರಿಂದ ಬೆನ್ನಲ್ಲಿಯೇ ಆದೇಶ ರದ್ದುಗೊಳಿಸಲಾಗಿತ್ತು. ಶರತ್ ಅವರು ಒಂದು ವರ್ಷ ಪೂರ್ಣಗೊಳ್ಳಲು ಇನ್ನೂ ಮೂರು ದಿನ ಬಾಕಿ ಉಳಿದಿರುವಾಗಲೇ ವರ್ಗಾವಣೆ ಮಾಡಲಾಗಿದೆ.

ಯಡಾ ಮಾರ್ಟಿನ್ ಪಿಟಿಸಿ ಎಸ್ಪಿ
ಕಲಬುರಗಿಯ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯ (ಪಿಟಿಸಿ)ಕ್ಕೆ ಐಪಿಎಸ್ ಅಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಪ್ರಾಚಾರ್ಯರನ್ನಾಗಿ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಲಬುರಗಿ ಎಸ್ಪಿಯಾಗಿದ್ದ ಅವರನ್ನು ಕೆಲವು ದಿನಗಳ ಹಿಂದಷ್ಟೆ ಉಡುಪಿಯ ನಕ್ಸಲ್ ನಿಗ್ರಹ ಪಡೆ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು. ಈಗ ಮರಳಿ ಕಲಬುರಗಿಯ ಪಿಟಿಸಿ ಪ್ರಾಚಾರ್ಯರನ್ನಾಗಿ ವರ್ಗಾವಣೆಗೊಳಿಸಲಾಗಿದೆ.