ಹಾಸನ: ಕಾರ್ಮಿಕ ಇಲಾಖೆ ಹಾಗೂ ಕನ್ನಡದ ನಂಬರ್ ವನ್ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ವಿಮೆ ನೋಂದಣಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗುರುವಾರ ಬೆಳಗ್ಗೆ 10 ಗಂಟೆಗೆ ವಿಜಯವಾಣಿ ಕಚೇರಿಯಲ್ಲಿ ವಿಮೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕಾರ್ಮಿಕ ನಿರೀಕ್ಷಕ ಪರಶುರಾಮ್ ಎಚ್ ಹೊಸದುರ್ಗ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರಾಗಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರು, ಗಿಗ್ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಅಸಂಘಟಿತ ವಲಯಕ್ಕೆ ಬರುವ ಪತ್ರಿಕೆ ವಿತರಕರಿಗೆ ನೆರವು ಒದಗಿಸಲು ಸರ್ಕಾರ ವಿಮೆ ಸೌಲಭ್ಯವನ್ನು ಕಲ್ಪಿಸಿದೆ. ಎಲ್ಲ ಪತ್ರಿಕೆ ವಿತರಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ದಿನಪತ್ರಿಕೆ ವಿತರಕರು ಅರೆಕಾಲಿಕವಾಗಿ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುತ್ತಾರೆ. ಬಹುತೇಕರು ಕಾರ್ಮಿಕರು ದಿನಪತ್ರಿಕೆಗಳನ್ನು ವಿತರಿಸಲು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಪತ್ರಿಕಾ ವಿತರಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಸೌಲಭ್ಯವನ್ನು ಪಡೆಯಲು, ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಕೇಂದ್ರ ಸರ್ಕಾರದ ಇ-ಶ್ರಮ್ ಫೋರ್ಟಲ್‌ನಲ್ಲಿ ನೋಂದಣಿಯಾಗಿರಬೇಕು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಕನ್ನಡದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ ಕಾರ್ಮಿಕ ಇಲಾಖೆಯೊಂದಿಗೆ ಕೈ ಜೋಡಿಸಿ ಪತ್ರಿಕೆ ವಿತರಕರ ನೋಂದಣಿಗೆ ಮುಂದಾಗಿರುವುದು ಶ್ಲಾಘನೀಯ. ಮಾಧ್ಯಮಗಳ ಸಹಾಯದೊಂದಿಗೆ ಇನ್ನು ಹೆಚ್ಚು ಹೆಚ್ಚು ಜನರನ್ನು ತಲಪಲು ಸಹಕಾರಿಯಾಗಲಿದೆ. ಎಲ್ಲ ಪತ್ರಿಕೆ ವಿತರಕರು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾಗಬೇಕು. ನೋಂದಣಿ ಆಗದವರಿಗೆ ಮಾಹಿತಿ ನೀಡಿ ಅವರನ್ನು ನೋಂದಣಿ ಮಾಡಿಸುವಂತೆ ಮಾಹಿತಿ ನೀಡಬೇಕು ಎಂದು ಹೇಳಿದರು.
ದಿನಪತ್ರಿಕೆ ವಿತರಣಾ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದ್ದಲ್ಲಿ 2 ಲಕ್ಷ ರೂ. ಪರಿಹಾರ. ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ 2 ಲಕ್ಷ ರೂ.ವರೆಗೆ (ಶೇಕಡಾವಾರು ದುರ್ಬಲತೆ ಆಧಾರದ ಮೇಲೆ) ಪರಿಹಾರ ನೀಡಲಾಗುವುದು. ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರೂ. ಪಡೆಯಬಹುದಾಗಿದೆ ಎಂದರು.